ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ: ರಸಾಯನಶಾಸ್ತ್ರ ಪರೀಕ್ಷೆ ರದ್ದು
ಶೀಘ್ರದಲ್ಲೇ ಮರುಪರೀಕ್ಷೆ
ಬೆಂಗಳೂರು, ಮಾ.21: ಸೋಮವಾರ ನಡೆಸ ಲಾದ ದ್ವಿತೀಯ ಪಿಯುಸಿ ಹೊಸ ಪಠ್ಯಕ್ರಮದ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಸದರಿ ವಿಷಯದ ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ಮರು ಪರೀಕ್ಷೆ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ವಿವರವಾದ ತನಿಖೆಗೆ ಆದೇಶಿಸಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿರುತ್ತದೆ.
ನಿಷ್ಪಕ್ಷಪಾತ ತನಿಖೆ ನಡೆಸುವ ಸಂಬಂಧ ಪರೀಕ್ಷಾ ಕೇಂದ್ರ ಮಹಿಳಾ ಪದವಿ ಪೂರ್ವ ಕಾಲೇಜು ಮಾಲೂರು ಕೋಲಾರ ಜಿಲ್ಲೆ ಈ ಎರಡು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಹಾಗೂ ಸಹ ಮುಖ್ಯ ಅಧೀಕ್ಷಕರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯ ದಿಂದ ಅಮಾನತು ಮಾಡಲಾಗಿದೆ. ಸದರಿ ಪರೀಕ್ಷಾ ಕೇಂದ್ರಗಳಲ್ಲಿ ಮುಂದಿನ ಪರೀಕ್ಷೆಗಳನ್ನು ನಡೆಸಲು ಬದಲಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.