ಮಂಗಳೂರು: ಆರ್‌ಟಿಐ ಕಾರ್ಯಕರ್ತನ ಕಗ್ಗೊಲೆ
ಮಂಗಳೂರು, ಮಾ.21: ಆರ್‌ಟಿಐ ಕಾರ್ಯಕರ್ತರೊಬ್ಬರನ್ನು ದುಷ್ಕರ್ಮಿ ಗಳು ಹತ್ಯೆಗೈದಿರುವ ಘಟನೆ ಇಂದು ಬೆಳಗ್ಗಿನ ಜಾವ ಕೊಡಿಯಾಲ್‌ಬೈಲ್‌ನ ಪಿವಿಎಸ್ ಬಳಿ ನಡೆದಿದೆ.
ಕೊಡಿಯಾಲ್‌ಬೈಲ್ ಬಳಿಯ ನಿವಾಸಿ ವಿನಾಯಕ ಪಾಂಡುರಂಗ ಬಾಳಿಗಾ(51) ಕೊಲೆಗೀಡಾದವರಾಗಿದ್ದಾರೆ. ಅವರು ಇಂದು ಮುಂಜಾನೆ ಸುಮಾರು 5:30 ಗಂಟೆಗೆ ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಕಾರ್‌ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನಕ್ಕೆ ಪೂಜೆಗೆಂದು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಬಾಳಿಗಾರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ತಲೆ ಮತ್ತು ಬೆನ್ನಿನ ಭಾಗಕ್ಕೆ ತೀವ್ರ ತರದ ಏಟು ತಗಲಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದ ವಿನಾಯಕ ಬಾಳಿಗಾ ಕಳೆದ ಕೆಲವು ಸಮಯದಿಂದ ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಕೆಲವರ ಅಕ್ರಮಗಳನ್ನು ಬಯಲಿಗೆಳೆದಿದ್ದರು ಎನ್ನಲಾಗಿದೆ. ಅಲ್ಲದೆ, ವೆಂಕಟರಮಣ ದೇವಸ್ಥಾನದ ಆಸ್ತಿ ದುರುಪಯೋಗಕ್ಕೆ ಸಂಬಂಧಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿ ದುಷ್ಕರ್ಮಿಗಳು ಇವರನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಡಿಸಿಪಿ ಡಾ.ಸಂಜೀವ ಪಾಟೀಲ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.