ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಿಐಡಿಗೆ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು, ಮಾ.22: ಪದವಿಪೂರ್ವ ಪರೀಕ್ಷೆಯಲ್ಲಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ತೀಘ್ರವಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರ ಮೇಶ್ವರ್ ತಿಳಿಸಿದರು.
ಬಿಜೆಪಿ ವಿಧಾನಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೊಂದಿಗೆ ಮಾತನಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ವೇಳೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಮಾ.21ರಂದು ನಡೆದ ರಸಾಯನ ಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆಯ ನಕಲೊಂದು ಇಲಾಖೆಯ ನಿರ್ದೇಶಕರಿಗೆ ವಾಟ್ಸ್‌ಆ್ಯಪ್ ಮೂಲಕ ಬಂದಿರುತ್ತದೆ. ಇದನ್ನು ಅಸಲಿ ಪ್ರಶ್ನೆ ಪತ್ರಿಕೆಯೊಂದಿಗೆ ಪರಿಶೀಲಿಸಿದಾಗ 37 ಪ್ರಶ್ನೆಗಳಲ್ಲಿ 36 ಪ್ರಶ್ನೆಗಳು ಹೊಂದಾಣಿಕೆಯಾಗಿರುತ್ತದೆ. ಹೀಗಾಗಿ ಪರೀಕ್ಷೆ ರದ್ದುಪಡಿಸುವಂತೆ ಆದೇಶ ನೀಡಲಾಯಿತು ಎಂದು ತಿಳಿಸಿದರು.
ಮಾ.29ಕ್ಕೆ ಮರು ಪರೀಕ್ಷೆ: ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪರಿಣಾಮ ರದ್ದು ಪಡಿಸಿದ್ದ ಪರೀಕ್ಷೆಯನ್ನು ಮಾ.29 ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಗೊಂದಲಕ್ಕೆ ಈಡಾಗಬಾರದೆಂದು ಅವರು ಮನವಿ ಮಾಡಿದರು.ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶಿಕ್ಷಣ ಇಲಾಖೆಯ ತನಿಖೆಯಿಂದ ಸತ್ಯಾಂಶ ಹೊರ ಬರುತ್ತದೆ ಎಂಬ ವಿಶ್ವಾಸ ನನಗಿಲ್ಲ. ಹೀಗಾಗಿ ಗೃಹ ಸಚಿವರೊಂದಿಗೆ ಮಾತನಾಡಿ, ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ನಡೆಯುವ ಎಲ್ಲ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯ ಬಗ್ಗೆ ಸಾಕಷ್ಟು ಭದ್ರತೆ ವಹಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಯನ್ನು ಹೊರ ರಾಜ್ಯದಲ್ಲಿ ಮುದ್ರಣ ಮಾಡಲಾಗುತ್ತದೆ. ಸುಮಾರು 20 ವರ್ಷದ ಅನುಭವವುಳ್ಳ 6 ಮಂದಿ ಶಿಕ್ಷಕರು ಏಕಕಾಲಕ್ಕೆ ಕೈ ಬರವಣಿಗೆಯಲ್ಲಿ ತಯಾರಿಸಿದ ಪ್ರಶ್ನೆ ಪತ್ರಿಕೆಯನ್ನು ಅತ್ಯಂತ ಜಾಗರೂಕತೆಯಿಂದ ಮುದ್ರಣಕ್ಕೆ ಕಳಿಸಲಾಗುತ್ತದೆ. ಆದರೂ ಪ್ರಶ್ನೆ ಪ್ರತಿಕೆ ಸೋರಿಕೆಯಾಗಿರುವುದು ಆಶ್ವರ್ಯ ತರಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಿಲ್ಲ: ರಸಾಯನ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತಾಗಿ ಉತ್ತರಿಸುವ ವೇಳೆ, ಗಣಿತ ಪ್ರಶ್ನೆ ಪತ್ರಿಕೆಯೂ ಇದೇ ರೀತಿ ಆಗಿದೆ. ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳು ಬಂದಿದೆ ಎಂದು ಆರೋಪಗಳಿದೆ ಎಂದು ಬಿಜೆಪಿಯ ಗೋ.ಮಧುಸೂದನ್, ಜೆಡಿಎಸ್ ಪುಟ್ಟಣ್ಣ ಸೇರಿದಂತೆ ಇನ್ನಿತರ ಸದಸ್ಯರು ಗಮನ ಸೆಳೆದರು.
ಈ ವೇಳೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸಚಿವ ಕಿಮ್ಮನೆ ರತ್ನಾಕರ, ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಪ್ರಶ್ನೆಗಳಿಗೂ ತಜ್ಞರಿಂದ ಅವಲೋಕಿಸಲಾಗಿತ್ತು. ಅಧ್ಯಾಪಕರ ತಂಡ ಉತ್ತರ ಪಡೆಯಲು ಯೋಗ್ಯವೆಂಬ ಅಂಶವನ್ನು ತಿಳಿಸಿದ್ದು, ಎಲ್ಲ ಪ್ರಶ್ನೆಗೆ ಉತ್ತರ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನೂ ನಾನು ಪಡೆದಿದ್ದೇನೆ. ಹೀಗಾಗಿ ಪಠ್ಯಕ್ರಮದ ಅನುಗುಣವಾಗಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದ್ದು, ಈ ಬಗ್ಗೆ ಯಾವುದೇ ಗೊಂದಲಗಳ ಅಗತ್ಯಲ್ಲ ಎಂದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವ ಜಯಚಂದ್ರ
ಬೆಂಗಳೂರು, ಮಾ. 22: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಬಯಲು ಪ್ರಕರಣಕ್ಕೆ ಶೀಘ್ರದಲ್ಲೇ ವರದಿ ಬರಲಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಉನ್ನತ ಶಿಕ್ಷಣ ಸಚಿವ ಜಯಚಂದ್ರ, ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯೇತರ ಪ್ರಶ್ನೆ ಕೇಳಿರುವ ಸಂಬಂಧ ಹೆಚ್ಚುವರಿ ಅಂಕ ನೀಡುವ ಸಂಬಂಧ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷ ರಫೀಕ್ ಅಹ್ಮದ್, ಬಿಜೆಪಿ ಸುರೇಶ್ ಕುಮಾರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ವಿದ್ಯಾರ್ಥಿಗಳ ಹಿತ ರಕ್ಷಣೆ ಸರಕಾರ ಕರ್ತವ್ಯ. ಪ್ರಶ್ನೆ ಪತ್ರಿಕೆ ಬಯಲಾಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಗೊಂದಲಕ್ಕೆ ಸಿಲುಕಿಸಿರುವುದು ಸರಕಾರದ ಗಮನದಲ್ಲಿದೆ ಎಂದರು.
ತ್ವರಿತವಾಗಿ ವರದಿ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದ ಅವರು, ಗಣಿತ ಪ್ರಶ್ನೆ ಪತ್ರಿಕೆ ವಿಚಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾ.29ರಂದು ಮರುಪರೀಕ್ಷೆ: ನಿರ್ದೇಶಕಿ ಪಲ್ಲವಿ
ಬೆಂಗಳೂರು, ಮಾ. 22: ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಸೋಮವಾರ ರದ್ದು ಪಡಿಸಿದ್ದ ದ್ವಿತೀಯ ಪಿಯುಸಿ ರಸಾಯನ ವಿಜ್ಞಾನ(ಹೊಸ ಪಠ್ಯಕ್ರಮ) ಪರೀಕ್ಷೆಯನ್ನು ಮಾ.29 ರಂದು ನಡೆಸಲಾಗುವುದು ಪದವಿ ಶಿಕ್ಷಣ ಇಲಾಖೆಯ ನಿರ್ದೇಶಕಿ ಪಲ್ಲವಿ ಆಕುರಾತಿ ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮವಾರ ನಡೆದ ರಸಾಯನ ವಿಜ್ಞಾನದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಕೋಲಾರ, ಬಳ್ಳಾರಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದರ ಮೂಲವನ್ನು ಪತ್ತೆ ಹಚ್ಚಲು ಇಲಾಖೆ ಸನ್ನದ್ಧಗೊಂಡಿದೆ. ಅಲ್ಲದೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಇದೇ ಮಾ.29ರಂದು ಮರು ಪರೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಲಾಗಿದೆ. ಪರೀಕ್ಷೆ ನಡೆಸುವ ಸಂಬಂಧ ವಿದ್ಯಾರ್ಥಿ ಮತ್ತು ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ಬರುತ್ತಿವೆ. ಪರೀಕ್ಷಾ ಪಾವಿತ್ರತೆಯ ದೃಷ್ಟಿಯಿಂದ ಇಲಾಖೆ ಮರು ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ ಅವರು, ಮಾ.29ರಂದು ನಡೆಯುವ ಪರೀಕ್ಷೆಗೆ ಎಲ್ಲ ರೀತಿಯಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೂರ್ವ ತಯಾರಿ ಮಾಡಿಕೊಳ್ಳ್ಳಲಾಗಿದೆ. ಮುಂದಿನ ಪರೀಕ್ಷೆಯಲ್ಲಿ ಈ ಘಟನೆ ಮರು ಕಳುಹಿಸದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
ಪಿಯು ರಸಾಯನಿಕ ವಿಜ್ಞಾನ ಮರುಪರೀಕ್ಷೆಗೆ ಆದೇಶ ನೀಡಿರುವುದನ್ನು ಖಂಡಿಸಿ ಮಂಗಳವಾರ ನಗರದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿ ಮುಂದೆ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆಗೆ ಇಲಾಖೆಯ ನಿರ್ಲಕ್ಷವೇ ಕಾರಣ. ಇದರಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅಲ್ಲದೆ, ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬೇಕಾದ ಪ್ರಮೇಯ ಬಂದಿದೆ ಎಂದು ವಿದ್ಯಾರ್ಥಿ ಪೋಷಕರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಪ್ರತಿಭಟನಾ ಸ್ಥಳದಲ್ಲಿ ವಿದ್ಯಾರ್ಥಿಗಳ ಆಕ್ರೋಶ ಮಿತಿ ಮೀರಿತ್ತು. ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಾಜ್ಯದ 975 ಕೇಂದ್ರಗಳಲ್ಲಿ ನಡೆದ ರಸಾಯನ ವಿಜ್ಞಾನ ಪರೀಕ್ಷೆಗೆ 1,74,901 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದೀಗ ಇವರೆಲ್ಲಾ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿದೆ.