×
Ad

ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಮೂರು ದಿನಗಳಲ್ಲಿ ಪ್ರಕಟ

Update: 2016-03-23 23:50 IST

ಬೆಂಗಳೂರು, ಮಾ.23: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಇನ್ನು ಎರಡೂ ಅಥವಾ ಮೂರು ದಿನಗಳಲ್ಲಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಆಯ್ಕೆಯಾದ ಜನಪ್ರತಿನಿಧಿಗಳ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದು, ಈ ಸಂಬಂಧದ ಮಾಹಿತಿ ನಿನ್ನೆಯಷ್ಟೇ ರಾಜ್ಯ ಸರಕಾರದ ಕೈಸೇರಿದೆ ಎಂದು ಸ್ಪಷ್ಟನೆ ನೀಡಿದರು.

ಯಾವುದೇ ಕಾರಣಕ್ಕೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಕ್ಕೆ ವಿಳಂಬ ನೀತಿ ಅನುಸರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಶೀಘ್ರದಲ್ಲೇ ಮೀಸಲಾತಿ ಪಟ್ಟಿ ಪ್ರಕಟಿಸಿ ಸ್ಥಳೀಯ ಮಟ್ಟದ ಅಧಿಕಾರವನ್ನು ಜನಪ್ರತಿನಿಧಿಗಳಿಗೆ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿಗಳಿಂದ ಮಾಹಿತಿ ಬರಲು ವಿಳಂಬವಾದ್ದರಿಂದ ಮೀಸಲಾತಿ ಪ್ರಕಟ ತಡವಾಗಿದೆಯೇ ಹೊರತು ಸರಕಾರಕ್ಕೆ ಅನ್ಯ ಉದ್ದೇಶವಿಲ್ಲ. ಇದೀಗಷ್ಟೇ ಮಾಹಿತಿ ಜಿಲ್ಲಾಧಿಕಾರಿಗಳಿಂದ ಬಂದಿದ್ದು ಕೂಡಲೇ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News