×
Ad

ಯೋಗ ಈಗ ಮಾರಾಟದ ಸರಕು : ಶ್ರೀ ರಾಜಾ ಸಂಧ್ಯಾ ನಾಥ್ ಜೀ

Update: 2016-03-24 12:14 IST

ಕಳೆದ ವರ್ಷ ಕೇಂದ್ರ ಸರಕಾರ ದೇಶಾದ್ಯಂತ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ತಿಂಗಳ ಹಿಂದೆ ಬೆಂಗಳೂರಿನಲ್ಲಿಯೂ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಇವು ನಿಜವಾದ ಯೋಗವಲ್ಲ ಎನ್ನುವ ವಾದಗಳೂ ಕೇಳಿಬರುತ್ತಿವೆ. ಹಾಗಾದರೆ ನಿಜವಾದ ಯೋಗ ಯಾವುದು ? ಯೋಗದ ಮೂಲ ಮೌಲ್ಯಗಳನ್ನು ನಿಜರೂಪದಲ್ಲಿ ಉಳಿಸಿಕೊಂಡು, ಈಗಲೂ ಕಠಿಣವಾಗಿ, ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ನಾಥ ಪಂಥದ ಯೋಗಿಗಳಲ್ಲಿ ಒಬ್ಬರಾದ ಶ್ರೀ ರಾಜಾ ಸಂಧ್ಯಾ ನಾಥ್ ಜೀ ಅವರೊಂದಿಗೆ ಹಿರಿಯ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು  ಕನ್ನಡ ಪ್ರಭ ಪತ್ರಿಕೆಗೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದು, ಇದು ಗುರುವಾರದ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯೋಗ ಬಹಳ ಪ್ರಾಚೀನವಾದುದು, ನಾಲ್ಕು ಯುಗಗಳಿಗಿಂತಲೂ ಹಿಂದಿನದು, ಗುರು ಗೋ ರಕ್ಷನಾಥರು ತಂದಿರುವಂಥದ್ದು, ಯೋಗ ಅಂದರೆ ಸಂಸಾರದಿಂದ ದೂರವಿರುವುದು, ಏಕಾಂತ, ಯೋಗಕ್ಕೂ ಗೃಹಸ್ಥ್ಯಕ್ಕೂ ಸಂಬಂಧವಿಲ್ಲ ಎಂದು ಶ್ರೀ ರಾಜಾ ಸಂಧ್ಯಾ ನಾಥ್ ಜೀ ತಿಳಿಸಿದರು. 

ಮುಂದುವರಿಸಿ ಮಾತನಾಡಿದ ಅವರು, ಪತಂಜಲಿಯ ಹೆಸರಿನ ಈ ಯೋಗ ನಿನ್ನೆ ಮೊನ್ನೆಯದು, ಹಠ ಯೋಗ ಪ್ರಾಚೀನವಾದುದು. ಈಗಿನ ಯೋಗವನ್ನು ವ್ಯಾಪಾರದ ಹಾಗೆ ಮಾಡಿದ್ದಾರೆ ಎಂದು ವಿವರಿಸಿದರು. 

ಈಗಿನ ಕಾಲಕ್ಕೆ, ಈಗಿನವರ ಬಯಕೆಗೆ ತಕ್ಕಂತೆ ಅದನ್ನು ಕೊಂಡೊಯ್ದಿದ್ದಾರೆ. ನಿಜವಾದ ಯೋಗಕ್ಕೆ ಇದು ಸರಿ ಹೊಂದದು, ಯೋಗದ ಅರ್ಥ, ಶಕ್ತಿಗಳು ಬೇರೆಯೇ ಆಗಿವೆ. ಯೋಗವೆಂದರೆ ಸಮಾಧಿ ಮತ್ತು ಧ್ಯಾನ. ಸಾಮಾನ್ಯರು ನಿಜವಾದ ಯೋಗ ಮಾಡಬೇಕಾದರೆ ಮನೆಯನ್ನು ತ್ಯಜಿಸಬೇಕು, ಮನೆಯನ್ನು ತ್ಯಜಿಸಿದರೂ ಸಾಕಾಗದು, ಇನ್ನಷ್ಟು ಸಾಧನೆ ಮಾಡಬೇಕು, ಇಲ್ಲವೆಂದಾದರೆ ಮಧ್ಯದಲ್ಲೇ ಸಿಕ್ಕಿಕೊಳ್ಳಬೇಕಾಗುತ್ತದೆ, ಅತ್ತ ಮನೆಗೂ ಇಲ್ಲ, ಇತ್ತ ಘಾಟಿಗೂ ಇಲ್ಲ - ನಾ ಘರ್ ಕಾ, ನಾ ಘಾಟ್ ಕಾ ಎಂದರು. 

ಇಂದು ಮಾಧ್ಯಮಗಳಲ್ಲಿ ಬರುವ ಯೋಗದ ಬಗ್ಗೆ ಮಾತನಾಡುತ್ತ, ನಾಥ ಸಂಪ್ರದಾಯದ ಯೋಗಿಯನ್ನು ನೀವು ಎಂದಿಗೂ ಟಿವಿಯಲ್ಲಾಗಲೀ, ಯಾವುದೇ ಶಿಬಿರಗಳಲ್ಲಾಗಲೀ ಕಾಣಲು ಸಾಧ್ಯವೇ ಇಲ್ಲ. ಅವರು ಪ್ರವಚನ ಮಾಡುವುದನ್ನಾಗಲೀ, ಧ್ಯಾನಸ್ಥರಾಗಿರುವುದನ್ನಾಗಲೀ, ಸಮಾಧಿಯಲ್ಲಿರುವುದನ್ನಾಗಲಿ ನೀವು ಕಾಣಲು ಸಾಧ್ತವೇ ಇಲ್ಲ ಎಂದು ಮಾಹಿತಿ ನೀಡಿದರು. 

ಯೋಗದಲ್ಲಿ ತೊಡಗಿಸಿಕೊಂಡ ಸ್ತ್ರೀಯರ ಬಗ್ಗೆ ಮಾತನಾಡುತ್ತಾ, ಗೋ ರಕ್ಷನಾಥರು ಪಾರ್ವತಿಗಷ್ಟೇ ಯೋಗದ ಪೂರ್ಣ ಜ್ಞಾನವನ್ನು ನೀಡಿರುವುದು, ಬೇರಾವ ಸ್ತ್ರೀ ಗೂ ಅಂತಹ ಬೋಧೆಯಾಗಿಲ್ಲ, ಆದ್ದರಿಂದ ಸ್ತ್ರೀ ಯರು ಯೋಗ ಮಾಡುವಂತಿಲ್ಲ ಎಂದು ಅಜ್ಞಾಪಿಸಿದರು. ಆದರೆ ಅವರಿಗೆ ಅಗತ್ಯವಾದ ವ್ಯಾಯಾಮವನ್ನು ಮಾಡಬಹುದು, ಆದರೆ ಅದನ್ನು ಯೋಗ ಎಂದು ಹೇಳುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News