ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುದಕ್ಕೆ ಸ್ಪಷ್ಟ ಸಾಕ್ಷ್ಯ ಇಲ್ಲ: ಅಜಯ್ ಸೇಠ್
ಬೆಂಗಳೂರು, ಮಾ.24: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುದಕ್ಕೆ ಸ್ಪಷ್ಟ ಸಾಕ್ಷ್ಯ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಸಿಐಡಿ ತನಿಖೆ ಆರಂಭಿಸಿದ್ದು, ಮುಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮುಂದೆ ಪ್ರಶ್ನೆ ಪತ್ರಿಕೆ ಬಂಡಲ್ ಹೊರ ತೆಗೆಯುವಾಗ ವೀಡಿಯೊ ಚಿತ್ರೀಕರಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಜಯ್ ಸೇಠ್ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬೇಡ ಎನ್ನುತ್ತಿದ್ದಾರೆ. ಇನ್ನು ಕೆಲವರು ಮರು ಪರೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ. ಮಾ.29ರಂದು ಮರುಪರೀಕ್ಷೆ ನಡೆಸುವ ವಿಚಾರದಲ್ಲಿ ಕೆಲವರಿಂದ ವಿರೋಧ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.
ಮಾ.29ರಂದು ಮರು ಪರೀಕ್ಷೆ ನಡೆಸದೆ ಇರಲು ಸಾಧ್ಯವಿಲ್ಲ. ಯಾಕೆಂದರೆ ಮುಂದೆ ಹತ್ತನೆಯ ತರಗತಿ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಇರುವುದರಿಂದ ಮರುಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಗಣಿತ ಪರೀಕ್ಷೆಯಲ್ಲಿ ಪಠ್ಯಕ್ರಮದಿಂದ ಹೊರತಾಗಿದ್ದ ಪ್ರಶ್ನೆಗಳು ಇದ್ದವು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಎಲ್ಲವೂ ವಿಷಯಾಧಾರಿತ ಪ್ರಶ್ನೆಗಳು.ತಜ್ಞರ ಸಮಿತಿ ಪರಿಶೀಲಿಸಿತ್ತು ,ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಕಂಡು ಬಂದರೆ ತಮಗೆ ಈಮೇಲ್ ಮಾಡುವಂತೆ ಸಲಹೆ ನೀಡಿದರು.