ಜನರಿಗೆ ನೀರು ನೀಡಲು ಸಾಧ್ಯವಾಗದ್ದಕ್ಕೆ ಸದನದಲ್ಲೇ ರಾಜೀನಾಮೆಗೆ ಮುಂದಾದ ಶಾಸಕ..
ಬೆಂಗಳೂರು.ಮಾ.24: ರಾಜ್ಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದ್ದು ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕಾಗಿ ಸದನ ಸಮಿತಿ ರಚಿಸಬೇಕು. ಸಮಸ್ಯೆ ನಿವಾರಿಸಲು ಶಾಸಕರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಪ್ರತಿಪಕ್ಷಗಳು ವಿಧಾನಸಭೆಯಲ್ಲಿಂದು ಸರ್ಕಾರವನ್ನು ಒತ್ತಾಯಿಸಿವೆ.
ಬರಗಾಲ ಹಾಗೂ ವಿದ್ಯುತ್ ಸಮಸ್ಯೆಯ ಮೇಲೆ ನಿಯಮ 69 ರಡಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು ಸಮಸ್ಯೆ ಬಗೆಹರಿಸಲು ಇಡೀ ಸದನದ ಸದಸ್ಯರು ಕಾರ್ಯಪ್ರವೃತ್ತರಾಗಬೇಕು. ಇದಕ್ಕಾಗಿ ಸದನ ಸಮಿತಿ ರಚನೆ ಅಗತ್ಯ ಎಂದು ಪ್ರತಿಪಾದಿಸಿದವು.
ಜೆಡಿಎಸ್ ಉಪ ನಾಯಕ ವೈ.ಎಸ್.ವಿ. ದತ್ತ ಮಾತನಾಡಿ, ಪರಿಸ್ಥಿತಿಯ ಅಧ್ಯಯನಕ್ಕೆ ಸದನ ಸಮಿತಿ ರಚಿಸಿದರೆ ಇಡೀ ಆಡಳಿತ ಯಂತ್ರ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಅಧಿಕಾರಿಗಳಿಗೆ ಹೆದರಿಕೆ ಬರುತ್ತದೆ. ಜತೆಗೆ ಕುಡಿಯುವ ನೀರಿಗೇ ಪ್ರತ್ಯೇಕವಾಗಿ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಬೇಕು ಎಂದರು.
ಸರ್ಕಾರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗದಿದ್ದರೆ ಹೇಳಲಿ.ನಾನೀಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿ ಕೆಲ ಕಾಲ ಸದನವೇ ಸ್ತಂಭೀಭೂತವಾಗುವಂತೆ ಮಾಡಿದ ಬೆಳವಣಿಗೆಯೂ ನಡೆಯಿತು.
ಒಂದು ಹಂತದಲ್ಲಿ ಭಾವೋದ್ವಿಗ್ವರಾಗಿ, ಕುಡಿಯುವ ನೀರನ್ನು ಸಕಾಲಕ್ಕೆ ಕೊಡಲು ಆಗುತ್ತಿಲ್ಲ ಎಂದು ಆಕ್ರೋಶಗೊಂಡ ಜನರು ನನಗೆ ಪೋನು, ಮೆಸೇಜು ಮಾಡುತ್ತಿದ್ದಾರೆ. ನಾನು ಭಾವಜೀವಿ. ನನಗೆ ಈ ಸಂಕಟವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈಗಲೇ ನನ್ನ ರಾಜೀನಾಮೆ ಪತ್ರ ಕೊಡಲು ನಾನು ಸಿದ್ಧ ಎಂದು ಬರೆದು ತಂದಿದ್ದ ರಾಜೀನಾಮೆ ಪತ್ರವನ್ನು ಅವರು ಸದನದ ಮುಂದೆ ಪ್ರದರ್ಶಿಸಿದಾಗ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ನಿಮಗೇನು ಸಮಸ್ಯೆ ಇದೆ ಹೇಳಿ. ಅದನ್ನು ಪರಿಹರಿಸಲು ಮಾರ್ಗ ಹುಡುಕೋಣ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಾಗ ದತ್ತ ಮೌನವಾದರು.
ನನ್ನ ಕ್ಷೇತ್ರವೊಂದರಲ್ಲಿಯೇ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.ಕಂದಾಯ ಸಚಿವರು ನೋಡಿದರೆ,ರಾಜ್ಯದ ಯಾವ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದಿದ್ದಾರೆ.ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ?ನನಗೆ ಗೊತ್ತಿಲ್ಲ ಎಂದು ವಿವರಿಸಿದರು.
ಇವತ್ತು ಹಳ್ಳಿಗಾಡಿನಲ್ಲಿ ಒಂದೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ,ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತಿದೆ.ಇದರಿಂದಾಗಿ ಆ ಕಡೆ ಕೃಷಿಗೂ ವಿದ್ಯುತ್ ಸಿಗುತ್ತಿಲ್ಲ.ಈ ಕಡೆ ಕುಡಿಯುವ ನೀರಿಗೂ ವಿದ್ಯುತ್ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಈ ಮಧ್ಯೆ ಬೆಳೆಹಾನಿಗೊಳಗಾದ ರೈತರಿಗೆ ಬೆಳೆವಿಮೆ ನೀಡಲು ಕೇಂದ್ರ ಸರ್ಕಾರ 1540 ಕೋಟಿ ರೂಗಳಷ್ಟು ಇನ್‌ಫುಟ್ ಸಬ್ಸಿಡಿ ನೀಡಿದೆ. ಆದರೆ ಈ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸರ್ಕಾರ ಎಡವಿದೆ ಎಂದು ಅವರು ನೇರವಾಗಿ ಆರೋಪಿಸಿದರು.
ಕುಡಿಯುವ ನೀರು ಒದಗಿಸಲು ನಮ್ಮೂರುಗಳಿಗೆ ಟ್ಯಾಂಕರ್‌ಗಳನ್ನು ಒದಗಿಸಿಲ್ಲ.ಹೀಗಾಗಿ ತಕ್ಷಣವೇ ಟ್ಯಾಂಕರ್‌ಗಳನ್ನು ಒದಗಿಸಿ.ಸಾಮಾನ್ಯ ಜನರಲ್ಲಿ ಬರಗಾಲ ಬಂದರೆ ಶಾಸಕರು,ಅಧಿಕಾರಿಗಳಿಗೆ ಸುಗ್ಗಿ ಎಂಬ ಭಾವನೆ ಇದೆ.ಹೀಗಾಗಿ ಈ ಮುಜುಗರದಿಂದ ನಮ್ಮನ್ನು ತಪ್ಪಿಸಲು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ನಿರ್ದಿಷ್ಟ ನೀತಿ ರೂಪಿಸಿ ಎಂದು ಸ್ಪಷ್ಟವಾಗಿ ಅವರು ವಿವರಿಸಿದರು.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಬೆಳೆಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು.ಆದರೆ ಹಲವೆಡೆ ಉದ್ದೇಶಪೂರ್ವಕವಾಗಿ ರೈತರನ್ನು ನಿರ್ಲಕ್ಷಿಸಿ,ಬಿಡುಗಡೆಯಾದ ಹಣದ ಪೈಕಿ ಹಣವನ್ನು ಉಳಿಸಿಕೊಂಡು ಅದನ್ನು ವಾಪಸ್ ಮಾಡಲು ತಯಾರಿ ನಡೆದಿದೆ ಎಂದು ವಿವರಿಸಿದರು.
ಇದಕ್ಕೆ ತಮ್ಮ ಕ್ಷೇತ್ರದ ಉದಾಹರಣೆಯನ್ನೇ ನೀಡಿದ ಅವರು,ಕಡೂರು ತಹಸೀಲ್ದಾರ್ ಅವರು ಜಿಲ್ಲಾಧಿಕಾರಿ ಕಛೇರಿಯ ಸೂಚನೆ ಮೇರೆಗೆ ರೈತರ ಬೆಳೆ ವಿಮೆಗೆ ನೀಡಿದ್ದ ಹಣದ ಪೈಕಿ ಮೂರು ಕೋಟಿ,ಅರವತ್ತು ಲಕ್ಷ ರೂ ಹಣವನ್ನು ಜಿಲ್ಲಾಧಿಕಾರಿ ಕಛೇರಿಗೆ ವಾಪಸ್ ಮಾಡಿದ್ದಾರೆ.
ಹೀಗೆ ಹಣ ಉಳಿಸಿ ವಾಪಸ್ ಮಾಡಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡದೆ ಅವರೇಕೆ ಈ ಕೆಲಸ ಮಾಡುತ್ತಾರೆ?ನನ್ನ ಕ್ಷೇತ್ರದಲ್ಲಿ ಬೆಳೆಹಾನಿಗೊಳಗಾದ ಇನ್ನೂ ಹತ್ತು ಸಾವಿರ ರೈತರ ಬ್ಯಾಂಕ್ ಖಾತೆಗಳನ್ನು ಗುರುತಿಸದೆ ಅನ್ಯಾಯ ಮಾಡಲಾಗಿದೆ.ಪರಿಹಾರ ನೀಡದೆ ತಪ್ಪು ಮಾಡಲಾಗಿದೆ ಎಂದು ಆರೋಪಿಸಿದರು.
ಈ ಹಂತದಲ್ಲಿ ಮಾತನಾಡಿದ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ,ಯಾವ ಕಾರಣಕ್ಕೂ ಕೇಂದ್ರ ಸರ್ಕಾರ ಬೆಳೆವಿಮೆಗಾಗಿ ರವಾನಿಸಿದ 1540 ಕೋಟಿ ರೂ ಹಣದಲ್ಲಿ ಬಿಡಿಗಾಸನ್ನೂ ವಾಪಸ್ಸು ಕಳಿಸುವುದಿಲ್ಲ ಎಂದು ನೇರ ಮಾತುಗಳಲ್ಲಿ ಸ್ಪಷ್ಟ ಪಡಿಸಿದರು.
ಆದರೆ ಯಾವಕಾರಣಕ್ಕೂ ಕೇಂದ್ರ ಸರ್ಕಾರ ಕೊಟ್ಟ ಹಣದಲ್ಲಿ ದುರುಪಯೋಗ ಆಗಬಾರದು ಎಂಬ ಕಾರಣಕ್ಕಾಗಿ ನಾವು ಎಚ್ಚರಿಕೆ ವಹಿಸಿದ್ದೇವೆ.ಹೀಗಾಗಿ ನಾವು ಜಿಲ್ಲಾಧಿಕಾರಿಗಳಿಗೆ ಹೇಳಿ ಹಣ ವಾಪಸ್ಸು ತರಿಸಿಕೊಳ್ಳುತ್ತಿದ್ದೇವೆ ಎಂಬುದು ಸರಿಯಲ್ಲ ಎಂದರು.
ಈ ಹಂತದಲ್ಲಿ ಮಾತು ಮುಂದುವರಿಸಿದ ವೈ.ಎಸ್.ವಿ.ದತ್ತಾ ಮಾತನಾಡಿ,ಕುಡಿಯುವ ನೀರಿಗೆ ಎದುರಾದ ಗಂಭೀರತೆಯ ಕುರಿತು ಪ್ರಸ್ತಾಪಿಸಿ,ಈ ಸಮಸ್ಯೆ ಪರಿಹರಿಸಿ,ಇಲ್ಲವೇ ನನ್ನ ರಾಜೀನಾಮೆಯನ್ನು ಪಡೆಯಿರಿ ಎಂದು ಪತ್ರವನ್ನು ಪ್ರದರ್ಶಿಸಿದಾಗ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಸಮಾಧಾನಿಸಿದರು.