ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮರುಪರೀಕ್ಷೆ: ಅಜಯ್‌ಸೇಠ್
ಬೆಂಗಳೂರು, ಮಾ.24: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ(ಹೊಸಪಠ್ಯಕ್ರಮ)ದ ಮರು ಪರೀಕ್ಷೆ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಅಜಯ್‌ಸೇಠ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಜೀವನಕ್ಕೆ ತಿರುವು ನೀಡುವ ಪಿಯುಸಿ ಪರೀಕ್ಷೆಯ ಫಲಿತಾಂಶ ವನ್ನಿಟ್ಟುಕೊಂಡು ರಾಜ್ಯದ ವಿದ್ಯಾರ್ಥಿಗಳು ವೃತ್ತಿಪರ ತರಗತಿಗಳಲ್ಲಿ ಪ್ರವೇಶ ಪಡೆಯಲು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಹೋದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರವೂ ಪರೀಕ್ಷೆಯನ್ನು ಸಿಂಧುತ್ವಗೊಳಿಸಲಾಗಿದೆ ಎಂಬ ಸಂಗತಿ ತಪ್ಪುಸಂಕೇತವನ್ನು ರವಾನಿಸಲಿದೆ ಎಂದರು.
ಇದು ಕೇವಲ ಪದವಿ ಪೂರ್ವ ಶಿಕ್ಷಣ ಮಂಡಳಿಯ ಘನತೆಗೆ ಮಾತ್ರವಲ್ಲ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಲಭಿಸದೆ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರಲಿದೆ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಂಡು ರಸಾಯನಶಾಸ್ತ್ರದ ಮರು ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಮರು ಪರೀಕ್ಷೆಯ ಸಂದರ್ಭದಲ್ಲಿ ರೂಪಿಸಿರುವ ಪ್ರಶ್ನೆ ಪತ್ರಿಕೆಯು ಅತ್ಯಂತ ಕಠಿಣವಾಗಿರುತ್ತದೆ ಎಂಬ ಕೆಲವು ವಿದ್ಯಾರ್ಥಿಗಳ ಆತಂಕವನ್ನು ಅವರು ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದರು.
ಗಣಿತ ಶಾಸ್ತ್ರ:
ದ್ವಿತೀಯ ಪಿಯುಸಿ ಪರೀಕ್ಷೆಯ ಗಣಿತ ಶಾಸ್ತ್ರದ ಪ್ರಶ್ನೆ ಪತ್ರಿಕೆಯು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಹಾಗೂ ತರಬೇತಿ ಮಂಡಳಿ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನ್ ರೀಸರ್ಚ್‌ಆ್ಯಂಡ್ ಟ್ರೈನಿಂಗ್)ಯ ಹೊಸ ಪಠ್ಯಕ್ರಮದ ವ್ಯಾಪ್ತಿಯಲ್ಲೇ ರಚಿತವಾಗಿದೆ. ಈ ಪಠ್ಯಕ್ರಮದ ಹೊರತಾಗಿ ರೂಪಿಸಲಾಗಿಲ್ಲ. ಈ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಪ್ರಶ್ನೆಗಳು ಪರಿಕಲ್ಪನೆ ಆಧಾರಿತ ಪ್ರಶ್ನೆಗಳಾಗಿದ್ದು, ಇವೆಲ್ಲವನ್ನೂ ನಿಗದಿಪಡಿಸಿದ ಅವಧಿಯಲ್ಲಿ ಉತ್ತರಿಸಬಹುದಾಗಿದೆ ಎಂದು ಅವರು ಹೇಳಿದರು.
ಬಹುತೇಕ ಪ್ರಶ್ನೆಗಳು ಪಠ್ಯ ಪುಸ್ತಕದಲ್ಲಿನ ಉದಾಹರಣೆ ಹಾಗೂ ಅಭ್ಯಾಸದ ಪ್ರಶ್ನೆಗಳೆ ಆಗಿವೆ. ಗಣಿತ ಶಾಸ್ತ್ರ ಪ್ರಶ್ನೆ ಪತ್ರಿಕೆಯ ಪ್ರಶ್ನೆ ಸಂಖ್ಯೆ:
03, 13, 16, 20, 30, 47 ಹಾಗೂ 49 ಬಿ ಪಠ್ಯ ಪುಸ್ತಕದಲ್ಲಿ ಅದೇ ರೂಪದಲ್ಲಿ ಇಲ್ಲದಿದ್ದರೂ, ಪಠ್ಯ ಪುಸ್ತಕದ ವಿಷಯಾಧಾರಿತ ಪ್ರಶ್ನೆಗಳೆ ಆಗಿವೆ. ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಮುದ್ರಣ ದೋಷವೂ ಇಲ್ಲ ಎಂದು ಅವರು ಹೇಳಿದರು. ಪ್ರಸಕ್ತ ಸಾಲಿನ ಗಣಿತ ಶಾಸ್ತ್ರ ಪ್ರಶ್ನೆ ಪತ್ರಿಕೆಯನ್ನು ಬುದ್ಧಿವಂತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರವಲ್ಲ, ಸಾಮಾನ್ಯ ವಿದ್ಯಾರ್ಥಿಗಳೂ ಉತ್ತರಿಸಬಹುದಾಗಿದೆ ಎಂಬುದು ವಿಷಯ ತಜ್ಞರ ಅಭಿಪ್ರಾಯವಾಗಿದೆ. ಗಣಿತ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಜಯ್ ಸೇಠ್ ಸಮರ್ಥಿಸಿಕೊಂಡರು. ಅನುಮಾನಕ್ಕೆ ಪರಿಹಾರ: ಇಷ್ಟಾದರೂ ಯಾರಲ್ಲಾದರೂ ಅನುಮಾನಗಳಿದ್ದರೆ, ಪಠ್ಯಕ್ರಮದ ವ್ಯಾಪ್ತಿಯಲ್ಲಿ ಇಲ್ಲದ ಪ್ರಶ್ನೆಗಳು ಎಂದು ಭಾವಿಸುವ ಪ್ರಶ್ನೆಗಳನ್ನು ವಿದ್ಯಾರ್ಥಿಗಳಾಗಲಿ, ವಿಷಯ ತಜ್ಞರಾಗಲಿ ಅಥವಾ ಸಾರ್ವಜನಿಕರಾಗಲಿ, ತಮ್ಮ ಇ-ಮೇಲ್ ವಿಳಾಸ: ಟ್ಟಟ್ಟಜಿಞಛಿಛ್ಠಃಚ್ಟ್ಞಠಿ.ಜಟ.ಜ್ಞಿ ಗೆ ಇ-ಮೇಲ್ ಕಳುಹಿಸಬಹುದು. ಸಾರ್ವಜನಿಕರಿಂದ ಸ್ವೀಕೃತವಾಗುವ ದೂರುಗಳನ್ನು ವಿಷಯ ತಜ್ಞರೊಡನೆ ಚರ್ಚಿಸಿ, ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಪಲ್ಲವಿ ಆಕುರಾತಿ, ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.