×
Ad

ಬರ ಪರಿಹಾರ: ಆಡಳಿತ-ವಿಪಕ್ಷಗಳ ಮಧ್ಯೆ ವಾಕ್ಸಮರ

Update: 2016-03-24 23:05 IST

ಬೆಂಗಳೂರು, ಮಾ. 24: ‘ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಒಂದು ಸಭೆಯನ್ನೂ ನಡೆಸಿಲ್ಲ’ ಎಂಬ ಬಿಜೆಪಿ ಸದಸ್ಯ ಗೋವಿಂದ ಕಾರಜೋಳ ಆರೋಪ, ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.
ಗುರುವಾರ ವಿಧಾನಸಭೆಯಲ್ಲಿ ‘ರಾಜ್ಯದಲ್ಲಿನ ಬರ ಮತ್ತು ವಿದ್ಯುತ್ ಅಭಾವ’ ಕುರಿತ ವಿಶೇಷ ಚರ್ಚೆಯ ಮೇಲೆ ಬಿಜೆಪಿ ಸದಸ್ಯ ಗೋವಿಂದ ಎಂ.ಕಾರಜೋಳ, ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಆವರಿಸಿದ್ದು, ರಾಜ್ಯ ಸರಕಾರ ಅಗತ್ಯ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ದೂರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ನಾಲ್ಕು ಕಂದಾಯ ವಿಭಾಗಗಳಲ್ಲಿಯೂ ನನ್ನ ಅಧ್ಯಕ್ಷತೆಯಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಬೆಳಗಾವಿ ವಿಭಾಗದಲ್ಲಿ ಧಾರವಾಡ ಕೇಂದ್ರ ಸ್ಥಾನದಲ್ಲಿ ಸಭೆ ನಡೆಸಿದ್ದು, ಆ ಸಭೆಗೆ ಬಿಜೆಪಿ ಸದಸ್ಯರೇ ಬಂದಿಲ್ಲ. ಆದರೆ, ಇದೀಗ ರಾಜ್ಯ ಸರಕಾರದ ವಿರುದ್ಧ ವಿನಾ ಕಾರಣ ಆರೋಪ ಮಾಡುವುದು ಸರಿಯಲ್ಲ. ಅತ್ಯಂತ ಜವಾಬ್ದಾರಿಯಿಂದ ಸರಕಾರ ಬರ ಸ್ಥಿತಿ ನಿರ್ವಹಣೆಗೆ ಸರಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿರುಗೇಟು ನೀಡಿದರು.
ಇದರಿಂದ ಆಕ್ರೋಶಗೊಂಡ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಭಾಗೀಯ ಮಟ್ಟದಲ್ಲಿ ಸಭೆ ಮಾಡಿದ್ದೇ ಸರಕಾರದ ಸಾಧನೆಯಲ್ಲ. ಇದರಿಂದ ಜನರಿಗೆ ಆದ ಪ್ರಯೋಜನವೇನು. ರಾತ್ರಿ ದೂರವಾಣಿ ಕರೆ ಮಾಡಿ ಬೆಳಗ್ಗೆ ಸಭೆ ಅಂದ್ರೆ ಬರಲಿಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಜೆಡಿಎಸ್‌ನ ವೈಎಸ್‌ವಿ ದತ್ತ, ಸಭೆಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಬೇಕು. ಬರ ಪರಿಹಾರ ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಸೂಚಿಸಿದರು.
 ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪದ ಹಿನ್ನೆಲೆಯಲ್ಲಿ ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೂಡಲೇ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಬರ ಪರಿಸ್ಥಿತಿ ಬಿಟ್ಟು ಬೇರೆ ಚರ್ಚೆ ಇಲ್ಲಿ ಅನಗತ್ಯವೆಂದು ಎಲ್ಲರನ್ನು ಸಮಾಧಾನಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News