‘ಬರ ಪರಿಹಾರ’ ಕಾರ್ಯಗಳಿಗೆ ಹಣದ ತೊಂದರೆ ಇಲ್ಲ: ಶ್ರೀನಿವಾಸ ಪ್ರಸಾದ್
ಬೆಂಗಳೂರು, ಮಾ. 24: ಬರ ಪರಿಹಾರ ಕಾರ್ಯಗಳಿಗೆ ಹಣಕಾಸಿನ ತೊಂದರೆ ಇಲ್ಲ, ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಅಗತ್ಯ ಮೇವು-ನೀರು ಒದಗಿಸಬೇಕು ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯದಲ್ಲಿನ ಬರ ಮತ್ತು ವಿದ್ಯುತ್ ಸಮಸ್ಯೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಹಿಂದೆಂದೂ ಕಂಡರಿಯದ ಭೀಕರ ಸ್ವರೂಪದ ಬರ ಆವರಿಸಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಹಣವನ್ನು ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು, ಜವಾಬ್ದಾರಿಯಿಂದ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯದ ಮೂವತ್ತು ಜಿಲ್ಲೆಗಳ ಪೈಕಿ ಉಡುಪಿ, ದಕ್ಷಿಣ ಕನ್ನಡ ಹೊರತುಪಡಿಸಿ 27 ಜಿಲ್ಲೆಗಳ 136 ತಾಲೂಕುಗಳಲ್ಲಿ ಬರ ಪೀಡಿತ ಎಂದು ಘೋಷಿಸಲಾಗಿದೆ ಎಂದ ಅವರು, ಬರ ಪರಿಸ್ಥಿತಿ ನಿರ್ವಹಿಸುವ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳೆಂಬ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಬರಪರಿಸ್ಥಿತಿಯ ಬಗ್ಗೆ ತನ್ನ ಅಧ್ಯಕ್ಷತೆಯಲ್ಲೇ ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ಎಲ್ಲ ವಿಭಾಗ ಮಟ್ಟದಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ಮಾಡಿದೆ. ಹತ್ತು ಬಾರಿ ಸಭೆ ನಡೆಸಲಾಗಿದೆ ಎಂದ ಅವರು, ಎಸ್‌ಡಿಆರ್‌ಎಫ್ ನಿಧಿಯಿಂದ ಕುಡಿಯುವ ನೀರು, ಜಾನುವಾರು ಸಂರಕ್ಷಣೆ ಕಾರ್ಯಗಳಿಗೆ 199.50 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರ ಬರ ಪರಿಸ್ಥಿತಿಯಿಂದ ಬೆಳೆ ಹಾನಿಗೆ ಇನ್‌ಪುಟ್ ಸಬ್ಸಿಡಿ ನೀಡಲು ಬಿಡುಗಡೆ ಮಾಡಿದ್ದ 1540.20ಕೋಟಿ ರೂ.ಪೈಕಿ ಈಗಾಗಲೇ 1212.97 ಕೋಟಿ ರೂ.ಅನುದಾನವನ್ನು 31ಲಕ್ಷ ರೈತರಿಗೆ ನೇರವಾಗಿ ವಿತರಣೆ ಮಾಡಲಾಗಿದೆ ಎಂದ ಅವರು ಹೇಳಿದರು.
ಬರ-ಪೀಡಿತ ಪ್ರದೇಶಗಳಲ್ಲಿ 32 ಗೋಶಾಲೆಗಳು ಹಾಗೂ 51 ಮೇವಿನ ಬ್ಯಾಂಕ್ ತೆರೆಯಲಾಗಿದೆ. ಮೇವಿನ ಬ್ಯಾಂಕ್‌ನಲ್ಲಿ ಮೇವನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿನ 385ಗ್ರಾಮಗಳಿಗೆ 882 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಸಂದರ್ಭದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಸರಬರಾಜಿಗೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ 62ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಒಟ್ಟು 1,417 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದ ಅವರು, ಮಾ.29ಕ್ಕೆ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ತ್ವರಿತ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಲಾಗುವುದು ಎಂದರು.
‘ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆ, ಗುಳೆ ತಪ್ಪಿಸಲು ಜನರಿಗೆ ಉದ್ಯೋಗ, ಜಾನುವಾರುಗಳಿಗೆ ಗೋಶಾಲೆಗಳನ್ನು ಅಗತ್ಯವಿರುವ ಕಡೆಗಳಲ್ಲಿ ಸ್ಥಾಪಿಸಲು ಜಿಲ್ಲಾಧಿಕಾರಿಗಳು ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು’
-ವಿ.ಶ್ರೀನಿವಾಸ ಪ್ರಸಾದ್, ಕಂದಾಯ ಸಚಿವ