×
Ad

ಹೈದರಾಬಾದ್ ವಿವಿ ಉಪಕುಲಪತಿ ರಾಜೀನಾಮೆಗೆ ಆಗ್ರಹ

Update: 2016-03-24 23:10 IST

ಬೆಂಗಳೂರು, ಮಾ.24: ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾದ ಹೈದರಾಬಾದ್ ವಿವಿ ಉಪ ಕುಲಪತಿ ರಾಜೀನಾಮೆ ನೀಡಬೇಕೆಂದು ರೋಹಿತ್ ವೇಮುಲಾ ಪರ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿ ಸದಸ್ಯರು ಪುರಭವನ ಮುಂದೆ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್‌ಎಸ್ ಮುಖಂಡ ಮಾವಳ್ಳಿ ಶಂಕರ್, ಬಿಜೆಪಿ ದೇಶದಲ್ಲಿ ಸರ್ವಾಧಿಕಾರ ಸರಕಾರವನ್ನು ನಡೆಸುತ್ತಿದೆ. ದಲಿತರು, ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಚಡ್ಡಿ ಮತ್ತು ಪ್ಯಾಂಟ್‌ಗಳ ಕುರಿತು ಚರ್ಚೆ ಮಾಡುತ್ತದೆ. ಆದರೆ ಈ ದೇಶದ ಜನರ ಮೂಲಭೂತ ಹಕ್ಕುಗಳ ಕುರಿತು ಚರ್ಚೆ ಮಾಡುತ್ತಿಲ್ಲ. ಬದಲಿಗೆ ಸಾಮಾಜಿಕ ಸಂಬಂಧಗಳನ್ನು ದಮನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಂತ್ರ ದೇಶದಲ್ಲಿ ಸಂವಿಧಾನವನ್ನು ಗೌರವಿಸಬೇಕಿದೆ ಹಾಗೂ ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕಿದೆ. ಆದರೆ ಬಿಜೆಪಿ ಮತ್ತು ಸಂಘಪರಿವಾರ ಮನುಸ್ಮತಿಯನ್ನು ಜಾರಿ ಮಾಡಲು ಹೊರಟಿದೆ. ನರೇಂದ್ರ ಮೋದಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಯಿಲ್ಲ. ಬದಲಿಗೆ ಬಂಡವಾಳಶಾಹಿಗಳ, ಕೋಮುವಾದಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಷ್ ಮಾತನಾಡಿ, ಮೋದಿ ಇಂದು ಮನುಷ್ಯನ ಘನತೆಯನ್ನು ಕಡಿಮೆ ಮಾಡಿ, ಪ್ರಾಣಿಗಳಿಗೆ ಹೆಚ್ಚು ಆದ್ಯತೆ ನೀಡುವ ಪ್ರಾಣಿಗಳ ಹೆಸರಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೊದಲು ಉನ್ನತ ಶಿಕ್ಷಣವನ್ನು ಹಿಡಿದಿಟ್ಟುಕೊಂಡಿದೆ. ಇದರ ಮೂಲಕ ಇಡೀ ದೇಶದಲ್ಲಿನ ವಿಶ್ವ ವಿದ್ಯಾನಿಲಯಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ನೋಡುತ್ತಿದೆ. ಇತ್ತೀಚಿನ ದಿನಗಳಲ್ಲಿ ದಲಿತರು ಮತ್ತು ಹಿಂದುಳಿದ ವಿದ್ಯಾರ್ಥಿಗಳು ವಿವಿಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವುದು, ಸಂಘಪರಿವಾರದ ಅಜೆಂಡಾಗಳನ್ನು ವಿಮರ್ಶಿಸುತ್ತಿರುವುದನ್ನು ಸಹಿಸದ ಬಿಜೆಪಿ ವಿದ್ಯಾನಿಲಯಗಳ ಮೇಲೆ ದಾಳಿ ನಡೆಸಿ ಉನ್ನತ ಶಿಕ್ಷಣವನ್ನು ಕಸಿದುಕೊಳ್ಳಲು ವ್ಯವಸ್ಥಿತವಾದ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಎಐಎಸ್‌ಎ ರಾಜ್ಯ ಮುಖಂಡ ಮಾರುತಿ ಮಾತನಾಡಿ, ರೋಹಿತ್ ವೇಮುಲಾ ಸಾವಿಗೆ ಕಾರಣವಾದ ಅಪ್ಪಾರಾವ್‌ಗೆ ಮತ್ತೆ ಅಧಿಕಾರ ವಹಿಸಿಕೊಳ್ಳಲು ಕೇಂದ್ರ ಸರಕಾರ ಅವಕಾಶ ನೀಡಿದೆ. ಇದನ್ನು ಬಳಸಿಕೊಂಡು ಮತ್ತೆ ಅಲ್ಲಿನ ಎಬಿವಿಪಿ ಸದಸ್ಯರು ಹೈದರಾಬಾದ್ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿಯನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಅಪ್ಪಾರಾವ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.
ಅಪ್ಪಾರಾವ್ ರಾಜೀನಾಮೆ ನೀಡಬೇಕು. ಹೈದರಾಬಾದ್ ವಿವಿಯ ವಿದ್ಯಾರ್ಥಿಗಳ ಸ್ವಾತಂತ್ರಹರಣ ನಿಲ್ಲಬೇಕು. ಕ್ಯಾಂಪಸ್ ಡೆಮಾಕ್ರಸಿ ಉಳಿಯಬೇಕು. ರೋಹಿತ್ ವೇಮುಲಾಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ನವ ಸಮಾಜವಾದಿ ಮುಖಂಡ ಜಗದೀಶ್, ಬಿವಿಎಸ್ ರಾಜ್ಯ ಸಂಚಾಲಕ ಹರಿರಾಮ್, ಡಿ.ಎಸ್‌ಎಫ್ ಮುಖಂಡ ಮಹೇಶ್, ಚಿಂತಕ ಶ್ರೀಪಾದಭಟ್, ಎಐಎಸ್‌ಎ ರಾಜ್ಯ ಮುಖಂಡ ಮಾರುತಿ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಚಿಕ್ಕರಾಜು, ಬಸವರಾಜು ಪೂಜಾರ್ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News