×
Ad

ಸದನದ ಕಲಾಪ ಬಿಜೆಪಿ ಸದಸ್ಯರಿಂದ ಹೈಜಾಕ್: ಉಗ್ರಪ್ಪ

Update: 2016-03-24 23:13 IST

ಬೆಂಗಳೂರು, ಮಾ.24: ರಾಜ್ಯದಲ್ಲಿ ನಡೆದಿದೆ ಎನ್ನಲಾದ ವಕ್ಫ್ ಆಸ್ತಿ ಕಬಳಿಕೆ ಸಂಬಂಧದ ವರದಿಯನ್ನು ಸರಕಾರ ತಿರಸ್ಕರಿಸಿದ್ದರೂ ಬಿಜೆಪಿ ಸದಸ್ಯರು ಸದನವನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ. ವಿಧಾನಸಭೆಯ ಸಭಾಂಗಣದಲ್ಲಿ ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ ಹಾಗೂ ಇನ್ನಿತರ ಕಾಂಗ್ರೆಸ್ ಸದಸ್ಯರು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
   ಮೊದಲಿಗೆ ಮಾತನಾಡಿದ ವಿ.ಎಸ್.ಉಗ್ರಪ್ಪ, ಹೈಕೋರ್ಟ್ ಆದೇಶದಂತೆ ಈಗಾಗಲೇ ವಕ್ಫ್ ಆಸ್ತಿ ಕಬಳಿಕೆ ಸಂಬಂಧದ ವರದಿಯನ್ನು ತಿರಸ್ಕರಿಸಲಾಗಿದ್ದರೂ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಸದಸ್ಯ ಗೋ.ಮಧುಸೂದನ್ ಅವರು ಸದನದ ಕಲಾಪವನ್ನು ವ್ಯರ್ಥಗೊಳಿಸಲು ಹಾಗೂ ಪ್ರಚಾರ ಪಡೆಯಲು ಅನ್ವರ್ ಮಾಣಿಪ್ಪಾಡಿ ವರದಿಯನ್ನು ನಿಯಮ ಬಾಹಿರವಾಗಿ ಮಂಡಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಕಿಡಿಕಾರಿದರು.
   ಮಾಣಿಪ್ಪಾಡಿ ಅವರು ವರದಿಯನ್ನು ತಯಾರಿಸುವಾಗ ವರದಿಯಲ್ಲಿ ನಮೂದಿಸಿರುವ ಹೆಸರಿನವರಿಗೆ ನೋಟಿಸ್‌ನ್ನು ಜಾರಿಗೊಳಿಸಬೇಕಾಗಿತ್ತು. ಆದರೆ, ಅವರಿಗೆ ಮಾಣಿಪ್ಪಾಡಿ ಅವರು ಯಾವುದೇ ನೋಟಿಸ್‌ನ್ನು ನೀಡಿಲ್ಲ. ಅಲ್ಲದೆ, ಕಾನೂನು ವಿಧಿ ವಿಧಾನಗಳ ಪ್ರಕಾರ ಕಾನೂನು ಸಚಿವರು ವರದಿ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದರೂ ಸದನದ ಬಾವಿಗಿಳಿದು ಗದ್ದಲ ಎಬ್ಬಿಸಿ ಬಹು ಕೋಟಿ ರೂ. ವೆಚ್ಚದ ಹಾಗೂ ಬಹು ವೌಲ್ಯಯುತವಾದ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.   
  ಆರೆಸ್ಸೆಸ್ ನಾಯಕರ ಭಾವಚಿತ್ರ: ಬಿಜೆಪಿ ಸದಸ್ಯರು ಸರಕಾರಿ ಕಚೇರಿಗಳಲ್ಲಿ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಸಿಎಂ ಅವರ ಭಾವಚಿತ್ರಗಳನ್ನು ಹಾಕುವುದನ್ನು ಬಿಟ್ಟು ಆರೆಸ್ಸೆಸ್ ನಾಯಕರ ಭಾವಚಿತ್ರಗಳನ್ನು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News