×
Ad

ಅಕ್ರಮವಾಗಿ ಆಯ್ಕೆಯಾದವರ ಭಡ್ತಿಗೆ ಶಿಫಾರಸು: ಶಿವರಾಮ್ ಆರೋಪ

Update: 2016-03-24 23:15 IST

ಬೆಂಗಳೂರು, ಮಾ.24: ಅಕ್ರಮವಾಗಿ ಆಯ್ಕೆಯಾಗಿ, ಪ್ರಕರಣಗಳು ತನಿಖಾ ಹಂತದಲ್ಲಿರುವ ಕೆಎಎಸ್ ಅಧಿಕಾರಿಗಳನ್ನು ತರಾತುರಿಯಲ್ಲಿ ಉನ್ನತ ಹುದ್ದೆಗಳಿಗೆ ಭಡ್ತಿ ನೀಡಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಆರೋಪಿಸಿದ್ದಾರೆ.
 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಲೋಕಾಸೇವಾ ಆಯೋಗ 1998, 1999 ಮತ್ತು 2004 ರಲ್ಲಿ ಕೆಎಎಸ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 736 ಕ್ಕೂ ಹೆಚ್ಚು ನೇಮಕಾತಿಗಳನ್ನು ಮಾಡಲಾಗಿತ್ತು. ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಾಯಿತು. ಸಿಐಡಿ ಮತ್ತು ಸತ್ಯ ಶೋಧನಾ ಸಮಿತಿ ವಿಚಾರಣೆಯನ್ನು ನಡೆಸಿ ಒಟ್ಟು ನೇಮಕಾತಿಯಲ್ಲಿ 484 ನೇಮಕಾತಿಗಳು ಅಕ್ರಮ ಎಂದು ಸಾಬೀತು ಪಡಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಲೋಕಾಸೇವಾ ಆಯೋಗವು 1998 ರ ಆಯ್ಕೆ ಪಟ್ಟಿಯಲ್ಲಿನ ಲೋಪಗಳನ್ನು ಒಪ್ಪಿಕೊಂಡಿದೆ. ನಂತರ ಹೊಸ ಆಯ್ಕೆ ಪಟ್ಟಿಯನ್ನು ನೀಡಲಾಗಿದೆ. ಇದರಿಂದ ಹಲವರು ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸಿದರು.

ಅಕ್ರಮ ನೇಮಕಾತಿ ಕುರಿತು ಕೋರ್ಟ್‌ನಲ್ಲಿ ತನಿಖೆ ನಡೆಯುತ್ತಿದೆ. ಮುಂದಿನ ಎ.11ರಿಂದ ವಿಭಾಗೀಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದು ಮುಗಿಯುವ ಮುನ್ನವೇ ಸರಕಾರ ಅವರಿಗೆ ಭಡ್ತಿಗೆ ಶಿಫಾರಸು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಮ್‌ಆದ್ಮಿ ಪಕ್ಷದ ರಾಜ್ಯ ಸಹಸಂಚಾಲಕ ರವಿಕೃಷ್ಣಾರೆಡ್ಡಿ, ಸಮಾಜವಾದಿ ಪಾರ್ಟಿ ಮುಖಂಡ ಸಿ.ಟಿ.ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News