ಆಪತ್ಬಾಂಧವರಿಗೆ ಜೀವರಕ್ಷಕ ಪ್ರಶಸ್ತಿ: ಖಾದರ್
ಬೆಂಗಳೂರು, ಮಾ.24: ಅಪಘಾತ ಸೇರಿದಂತೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಬಳಲುತ್ತಿರುವ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ವ್ಯಕ್ತಿಗೆ ಹಾಗೂ ಸೂಕ್ತ ಚಿಕಿತ್ಸೆ ನೀಡುವ ವೈದ್ಯರಿಗೆ ‘ಜೀವ ರಕ್ಷಕ ಪ್ರಶಸ್ತಿ’ಯನ್ನು ಕೊಡುವಂತಹ ಹೊಸ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವಿಲ್ಲಿಂಗ್ಡನ್ ರಾಜ್ಯ ಕ್ಷಯ ರೋಗ ಕೇಂದ್ರ ನಗರದ ನಿಮ್ಹಾನ್ಸ್‌ನ ಕನ್ವೆನ್‌ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿ ಪ್ರಾಣವನ್ನು ಉಳಿಸುವ ವ್ಯಕ್ತಿಗಳನ್ನು ಹಾಗೂ ಪ್ರಾಣ ಹೋಗುವ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡುವ ವೈದ್ಯರನ್ನು ವಿಶೇಷವಾಗಿ ಗೌರವಿಸುವುದು ಸರಕಾರದ ಕರ್ತವ್ಯ. ಹೀಗಾಗಿ ಇವರಿಗೆ ಜೀವರಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಕ್ಷಯ ರೋಗದ ಕುರಿತು ಜಾಗೃತಿ ಅಗತ್ಯ. ಹಲವು ವೇಳೆ ರೋಗದ ಲಕ್ಷಣ ಕಂಡು ಬಂದಿದ್ದರೂ, ಅರಿವಿನ ಕೊರತೆಯಿಂದಾಗಿ ನಿರ್ಲಕ್ಷಿಸಲಾಗುತ್ತದೆ. ಇದರಿಂದ ರೋಗ ಉಲ್ಬಣವಾದಾಗ ಆಸ್ಪತ್ರೆಗೆ ಬಂದರೂ ಯಾವುದೇ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಹೀಗಾಗಿ ಕ್ಷಯ ರೋಗದ ಲಕ್ಷಣಗಳ ಕುರಿತು ಜನತೆಗೆ ಮಾಹಿತಿ ನೀಡುವ ಕಾರ್ಯಕ್ರಮ ಗಳು ಹೆಚ್ಚಾಗಬೇಕು ಎಂದು ಸಚಿವ ಯು.ಟಿ.ಖಾದರ್ ಸಲಹೆ ನೀಡಿದರು.
ಜನತೆಯ ಆರೋಗ್ಯದ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಬಹುದು. ಆದರೆ, ಅವು ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಯಾಗದೆ ಹೋದರೆ ಕೋಟ್ಯಂತರ ರೂ. ನಷ್ಟ ಹಾಗೂ ಜನತೆಗೆ ವಿಶ್ವಾಸದ್ರೋಹ ಮಾಡಿದಂತಾಗುತ್ತದೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದು ಜನತೆಯ ಆರೋಗ್ಯವನ್ನು ಸುಧಾರಿಸಬೇಕು ಎಂದು ಖಾದರ್ ತಿಳಿಸಿದರು.
ಚಿತ್ರ ನಟ ವಿಜಯ ರಾಘವೇಂದ್ರ ಮಾತ ನಾಡಿ, ಅಶುದ್ಧ ನೀರು ಹಾಗೂ ಆಹಾರ ಸೇವನೆಯಿಂದ ರೋಗಗಳು ಬಹುತೇಕವಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ದೇಹಕ್ಕೆ ಬೇಡದ ರೋಗಗಳಿಗೆ ಕಾರಣವಾಗುವ ಆಹಾರವನ್ನು ತಿನ್ನದಂತೆ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳಬೇಕೆಂದು ತಿಳಿಸಿದರು. ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು. ಇದಕ್ಕಾಗಿ ಪ್ರತಿದಿನ ವ್ಯಾಯಾಮ, ಯೋಗ ಸೇರಿದಂತೆ ಮತ್ತಿತರರ ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳುವುದರ ಮೂಲಕ ಆರೋಗ್ಯಕರವಾದ ದೇಹ ಹಾಗೂ ಮನಸ್ಸನ್ನು ಪಡೆಯಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ್ ಜಿ.ಜಾಧವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ.ವಿಮಲಾ ಆರ್.ಪಾಟೀಲ್, ಚಿತ್ರ ನಟಿ ಸಂಜನಾ ಮತ್ತಿತರರಿದ್ದರು.