×
Ad

ವಿದ್ಯುತ್ ಸಮಸ್ಯೆಗೆ ಅಧಿಕಾರಿಗಳೇ ಹೊಣೆ: ಡಿಕೆಶಿ

Update: 2016-03-24 23:51 IST

‘ಶರಾವತಿ’ಯ ಒಂದು ಘಟಕ ಇಂದು ಆರಂಭ

ಬೆಂಗಳೂರು, ಮಾ. 24: ಭೀಕರ ಸ್ವರೂಪದ ಬರ ಪರಿಸ್ಥಿತಿಸೃಷ್ಟಿಯಾಗಿದ್ದರೂ ರಾಜ್ಯದ ಯಾವುದೇ ಭಾಗ ದಲ್ಲಿಯೂ ವಿದ್ಯುತ್ ಕ್ಷಾಮ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬರ ಮತ್ತು ವಿದ್ಯುತ್ ಅಭಾವದ ಸಂಬಂಧ ಚರ್ಚೆಗೆ ಉತ್ತರ ನೀಡಿದ ಅವರು, ಯಾವುದೇ ಭಾಗದಲ್ಲಿ ವಿದ್ಯುತ್ ಸಮಸ್ಯೆ ಸೃಷ್ಟಿಯಾದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಶರಾವತಿ ಘಟಕ ಇಂದು ಕಾರ್ಯಾರಂಭ: ಬೆಂಕಿ ಆಕಸ್ಮಿಕದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶರಾವತಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರದ ಒಂದು ಘಟಕ ನಾಳೆ ಕಾರ್ಯಾರಂಭ ಮಾಡಲಿದೆ ಎಂದ ಅವರು, ವಿದ್ಯುತ್ ಸಮಸ್ಯೆ ನಿವಾರಣೆಗೆ ಶಕ್ತಿಮೀರಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 6ಗಂಟೆಯಿಂದ 9 ಮತ್ತು ಸಂಜೆ 6ರಿಂದ ರಾತ್ರಿ 10ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಈ ವ್ಯತ್ಯಯ ಆಗದಂತೆ ಕ್ರಮ ವಹಿಸಲಾಗಿದೆ ಎಂದ ಅವರು, ನಿಗದಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸ ಲಾಗುವುದು ಎಂದು ಅಭಯ ನೀಡಿದರು.

ಜೂನ್ ವೇಳೆಗೆ ವಿದ್ಯುತ್ ಪರಿಸ್ಥಿತಿ ಕೊಂಚ ಸುಧಾರಿಸಲಿದ್ದು, ಆರ್‌ಟಿಪಿಎಸ್, ಬಿಟಿಪಿಎಸ್, ಶರಾವತಿಯ ಮತ್ತೆರಡು ಘಟಕಗಳು ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪಾವಗಡದಲ್ಲಿ 300 ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

2018ರ ವೇಳೆ ರಾಜ್ಯದಲ್ಲಿನ ರೈತರಿಗೆ ಹಗಲು ಹೊತ್ತಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ವಿದ್ಯುತ್ ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲಾಗುವುದು ಎಂದ ಅವರು, ಇಡೀ ದೇಶವೇ ಬೆಂಗಳೂರಿನತ್ತ ದೃಷ್ಟಿ ನೆಟ್ಟಿದ್ದು, ವಿದ್ಯುತ್ ಕ್ಷಾಮ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದರು.

ಬಿಜಾಪುರ ಕೂಡಗಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಹೋರಾಟ ನಡೆಸಿದ್ದ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಅವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News