ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಮತ್ತೊಂದು ಕಾಡಾನೆ ಸೆರೆ
ಮಡಿಕೇರಿ ಮಾ.25: ಚೆಟ್ಟಳ್ಳಿ ಸಮೀಪದ ಭೂತನಕಾಡು, ಹೊರೂರು, ಕಾರಕೊಲ್ಲಿ ಕಾಫಿ ತೋಟ ದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.
ಶುಕ್ರವಾರ ಬೆಳಗ್ಗೆನಿಂದಲೇ ಕಾರ್ಯಾಚರಣೆಗೆ ಇಳಿದ ಎಸಿಎಫ್ ಮನೋಜ್ ಕುಮಾರ್ ನೇತೃತ್ವದ 6 ಸಾಕಾನೆಗಳು ಹಾಗೂ 70ಕ್ಕೂ ಹೆಚ್ಚು ಸಿಬ್ಬಂದಿ ತಂಡ ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಸುಮಾರು 15 ಕಿ.ಮೀ. ವ್ಯಾಪ್ತಿ ಯಲ್ಲಿ ಕಾಫಿ ತೋಟಗಳಲ್ಲಿ ಹುಡು ಕಾಟ ನಡೆಸಿದ ಸಂದರ್ಭ ಅರಣ್ಯ ಇಲಾಖೆಯ ಕುಶಾಲನಗರ ವಿಭಾಗದ ರಂಜನ್ ಹಾಗೂ ಪಾಲಿಬೆಟ್ಟದ ಕಾರ್ತಿಕ್ ಎಂಬವರು ಮೂರು ದಿನಗಳ ಹಿಂದೆ ಮಹಿಳೆಯನ್ನು ಬಲಿ ತೆಗೆದುಕೊಂಡ ಕಾಡಾನೆಯ ಗುರುತು ಪತ್ತೆ ಹಚ್ಚಿದರು.
ಸಂಜೆ 4:55ಕ್ಕೆ ಅರಿವಳಿಕೆ ತಜ್ಞರಾದ ವೆಂಕಟೇಶ್ ಹಾಗೂ ಕರುಂಬಯ್ಯ ಅವರು ಕೋವಿ ಮೂಲಕ ಹಾರಿಸಿದ ಅರಿವಳಿಕೆಯಿಂದ ಕಾಡಾನೆ ಒಂದು ಕಿ.ಮೀ. ದೂರ ಓಡಿ ನೆಲಕ್ಕುರುಳಿತು. ಈ ಸಂದರ್ಭ ಜೊತೆಯಲ್ಲಿದ್ದ ಕಾಡಾನೆಗಳ ಹಿಂಡು ದಿಕ್ಕಾಪಾಲಾಗಿ ಕಾಫಿ ತೋಟಗಳಿಗೆ ನುಸುಳಿದವು. ಬಳಿಕ ಸಾಕಾನೆಗಳ ಸಹಕಾರದಿಂದ ಡಾ. ಉಮಾಶಂಕರ್ ಅವರು ಆರೈಕೆ ನೀಡಿದ ನಂತರ ಲಾರಿಯಲ್ಲಿ ದುಬಾರೆ ಆನೆ ಶಿಬಿರಕ್ಕೆ ಸಾಗಿಸಲಾಯಿತು.
ಕಾರ್ಯಾಚರಣೆಯಲ್ಲಿ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಅರ್ಜುನ, ವಿಕ್ರಂ, ಹರ್ಷ, ಕೃಷ್ಣ ಮತ್ತು ಭೀಮ ಸೇರಿದಂತೆ ಮಾವುತರು ಪಾಲ್ಗೊಂಡಿದರು.
ಈ ಸಂದರ್ಭ ಡಿಸಿಎಫ್ ಏಡುಕುಂಡಲು, ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಎಸಿಎಫ್ ಭಾಸ್ಕರ್, ಕುಶಾಲನಗರ ಅರಣ್ಯ ವಲಯಾಧಿಕಾರಿ ಚಿಣ್ಣಪ್ಪ, ಸುಂಟಿಕೊಪ್ಪ ಠಾಣಾಧಿಕಾರಿ ಹರಿವರ್ಧನ್, ಮಡಿಕೇರಿ ಗ್ರಾಮಾಂತರ ಠಾಣಾ ಧಿಕಾರಿ ಶಿವಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.
ಕಾರ್ಯಾಚರಣೆ ಸಂದರ್ಭ ಚೆಟ್ಟಳ್ಳಿ ಮತ್ತು ಸುಂಟಿಕೊಪ್ಪ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು