×
Ad

ಬಜೆಟ್ ಅಧಿವೇಶನದ ನಂತರ ಸಂಪುಟ ಪುನಾರಚನೆ?

Update: 2016-03-25 23:40 IST

ಬೆಂಗಳೂರು, ಮಾ.25: ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯಗೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟವನ್ನು ಪುನಾರಚನೆ ಮಾಡಲು ನಿರ್ಧರಿಸಿದ್ದು, 15 ಮಂದಿ ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಜೆಟ್ ಅಧಿವೇಶನವು ಮಾ.31ಕ್ಕೆ ಕೊನೆಗೊಳ್ಳಲಿದ್ದು, ಎಪ್ರಿಲ್ ಮೊದಲ ವಾರ ಅಥವಾ ಯುಗಾದಿ ಹಬ್ಬದ ನಂತರ ಸಚಿವ ಸಂಪುಟವನ್ನು ಪುನಾರಚನೆ ಮಾಡುವುದು ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯ ಸರಕಾರವು ಮುಂದಿನ ಮೇ ತಿಂಗಳಿಗೆ ಮೂರು ವರ್ಷಗಳನ್ನು ಪೂರೈಸಲಿದ್ದು, ಇನ್ನೆರಡು ವರ್ಷಗಳಲ್ಲಿ ಯುವಕರು, ಉತ್ಸಾಹಿಗಳಿಗೆ ಸಂಪುಟದಲ್ಲಿ ಅವಕಾಶವನ್ನು ಕಲ್ಪಿಸಿ, ಆಡಳಿತವನ್ನು ಚುರುಕುಗೊಳಿಸಬೇಕು ಎಂಬುದು ಬಹುತೇಕ ಶಾಸಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 15 ಮಂದಿ ಹೊಸಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಶಾಸಕರ ಒಂದು ತಂಡ ಸಿದ್ಧತೆ ಆರಂಭಿಸಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ, ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್ರಚನೆ ಮುಂದೂಡಲ್ಪಟ್ಟಿತ್ತು. ಇದೀಗ, ರಾಜ್ಯ ಬಜೆಟ್ ಅಧಿವೇಶನದ ನಂತರ ಸದ್ಯಕ್ಕೆ ಅಂತಹ ಯಾವುದೇ ಚುನಾವಣೆಗಳು ಎದುರಾಗದಿರುವುದರಿಂದ ಎಪ್ರಿಲ್‌ನಲ್ಲೇ ಸಂಪುಟವನ್ನು ಪುನರ್ರಚನೆ ಮಾಡಬೇಕೆಂಬ ಒತ್ತಡ ಪಕ್ಷದ ಆಂತರಿಕ ವಲಯದಲ್ಲಿ ಹೆಚ್ಚುತ್ತಿದೆ.

ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ವರದಿ ನೀಡಲು ಇತ್ತೀಚೆಗೆ ಹೊಸದಿಲ್ಲಿಗೆ ತೆರಳಿದ್ದ ಸಿದ್ದರಾಮಯ್ಯ, ಸಚಿವ ಸಂಪುಟ ಪುನರ್ರಚನೆಯ ಪ್ರಸ್ತಾವನೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಮುಂದಿಟ್ಟಿದ್ದರು.

ಮುಖ್ಯಮಂತ್ರಿಯ ಪ್ರಸ್ತಾವನೆಗೆ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಜೆಟ್ ಅಧಿವೇಶನದ ಬಳಿಕ ಸಂಭಾವ್ಯ ಸಚಿವರ ಮಾಹಿತಿಯನ್ನು ತೆಗೆದುಕೊಂಡು ಹೊಸದಿಲ್ಲಿಗೆ ಬರುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಅನುಭವಿಗಳು ಹಾಗೂ ಉತ್ಸಾಹಿಗಳನ್ನು ಒಳಗೊಂಡ ಸಮತೋಲಿತ ಸಂಪುಟವನ್ನು ಕಾಯ್ದುಕೊಳ್ಳಲು ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News