ನೂತನ ಪಿಂಚಣಿ ಯೋಜನೆಗೆ ವಿರೋಧ
ಸಾಗರ, ಮಾ.26: ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸುವಂತೆ ಶುಕ್ರವಾರ ಗುರುಭವನದಲ್ಲಿ ನಡೆದ ರಾಜ್ಯ ಸರಕಾರಿ ಎನ್.ಪಿ.ಎಸ್. ನೌಕರರ ಸಂಘದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲ್ಲಾ ಸಂಚಾಲಕ ರಾಘವೇಂದ್ರ, ಎನ್‌ಸಿಪಿ ನೌಕರರನ್ನು ಸಂಘಟಿಸಿ, ನೂತನ ಯೋಜನೆಯನ್ನು ಜಾರಿಗೆ ತರದಂತೆ ಸರಕಾರದ ಮೇಲೆ ಒತ್ತಡ ತರುವ ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ತಾಲೂಕಿನಲ್ಲಿಯೂ ಘಟಕಗಳನ್ನು ರಚನೆ ಮಾಡಲಾಗುತ್ತಿದೆ. ಇದು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಇದರ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ನೂತನ ಯೋಜನೆಯಿಂದ ಸರಕಾರಿ ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸುವಂತೆ ಆಗುತ್ತದೆ. ಸರಕಾರಿ ನೌಕರರು ತಮ್ಮ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದು, ಅವರಿಗೆ ಸಿಗುವ ಸೌಲಭ್ಯಗಳಿಗೆ ಕೊಡಲಿಪೆಟ್ಟು ಹಾಕುವ ಕೆಲಸವಾಗಬಾರದು. ಯೋಜನೆ ಕೈಬಿಡುವಂತೆ ರಾಷ್ಟ್ರಮಟ್ಟದ ಸಂಘಟನೆಗಳ ಜೊತೆ ಕೈಜೋಡಿಸಿ, ಹೋರಾಟಕ್ಕೆ ಇಳಿಯುವುದು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಬಹುದು ಎಂದರು. ಸಂಘದ ಅಧ್ಯಕ್ಷ ಎಂ. ಚಿಕ್ಕಣ್ಣನವರ್ ಮಾತನಾಡಿ, ಎನ್‌ಸಿಪಿ ನೌಕರರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸಂಘಟಿತ ಧ್ವನಿ ಅಗತ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಿಕಾರಿಪುರ ಘಟಕದ ಅಧ್ಯಕ್ಷ ಹೂವಯ್ಯನಾಯ್ಕ, ಬಸವನಗೌಡ ಹರಗಿ, ವೀರೇಂದ್ರ, ಪ್ರವೀಣ್ ಮತ್ತಿತರರು ಉಪಸ್ಥಿತರಿದರು.