×
Ad

ಕನ್ನಡಪರ ಸಂಘಟನೆಗಳಿಂದ ರೈಲು ತಡೆ, ಧರಣಿ

Update: 2016-03-26 23:23 IST

ಬೆಂಗಳೂರು, ಮಾ.26: ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೆ ಪ್ರತಿಭಟನಾ ರ್ಯಾಲಿಯನ್ನು ನಡೆಸಿ, ಬೆಂಗಳೂರು ವಿಶಾಖಪಟ್ಟಣಂ ರೈಲನ್ನು ತಡೆದು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ, ಗೋವಾ, ಕರ್ನಾಟಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದ ಸಮಸ್ಯೆಯನ್ನು 15 ದಿನದಲ್ಲಿ ಬಗೆ ಹರಿಸಬೇಕು. ಬಗೆಹರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು. ನರೇಂದ್ರ ಮೋದಿ ಅವರು ರೈತರ ಸಮಾವೇಶಕ್ಕೆ ಬೆಳಗಾವಿಗೆ ಬಂದರೂ ಮಹದಾಯಿ ಯೋಜನೆ ಜಾರಿ, ರೈತರ ಸಾವು ಸೇರಿದಂತೆ ರಾಜ್ಯದ ಇತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿಲ್ಲ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯದ ಕೇಂದ್ರ ಸಚಿವರೂ ಪ್ರಧಾನಿ ಅವರಿಗೆ ಮಹದಾಯಿ ಯೋಜನೆ ಜಾರಿ ಬಗ್ಗೆ ಮನದಟ್ಟು ಮಾಡಿಕೊಡುತ್ತಿಲ್ಲ ಎಂದು ಹೇಳಿದರು.
 ನಿರ್ಮಾಪಕ, ಕನ್ನಡ ಪರ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ಸರಕಾರ ಹಾಗೂ ಹೋರಾಟಗಾರರು ಆಪಾದಿಸಿದರೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ, ತಾವೇ ಖುದ್ದಾಗಿ ಮಹದಾಯಿ ಯೋಜನೆ ಜಾರಿಯಾಗದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳುತ್ತಿಲ್ಲ ಎಂದು ಆಪಾದಿಸಿದರು. ಉತ್ತರ ಕರ್ನಾಟಕದ ಜನರು ಕುಡಿಯಲು ನೀರಿಲ್ಲದ್ದಕ್ಕೆ ತತ್ತರಿಸಿ ಹೋಗಿದ್ದರೂ ಪ್ರಧಾನಿ ಅವರು 7 ಟಿಎಂಸಿ ನೀರನ್ನು ರಾಜ್ಯಕ್ಕೆ ಬಿಡುವ ಹಿನ್ನೆಲೆಯಲ್ಲಿ ಮಾತುಕತೆಯನ್ನು ನಡೆಸುತ್ತಿಲ್ಲ. ಅಲ್ಲದೆ, ಇಂದು 180 ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದ್ದು, ಈ ನೀರನ್ನು ತಡೆಗಟ್ಟುವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಜೆ.ಎಂ.ವೀರಸಂಗಯ್ಯ, ಶಿವರಾಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿ ತರಿದ್ದರು.

 ಟ್ರಾಫಿಕ್ ಜಾಮ್: ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೆ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದರಿಂದ ಶಾಂತಲಾ ಸಿಲ್ಕ್ ಹೌಸ್, ಉಪ್ಪಾರಪೇಟೆ ಪೊಲೀಸ್ ಠಾಣಾ ಎದುರಿನ ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನ ಸವಾರರು ತಮ್ಮ ಸ್ಥಳಗಳಿಗೆ ತಲುಪಲು ಪರದಾಡಿದರು. ಪೊಲೀಸ್-ವಾಟಾಳ್ ಮಧ್ಯೆ ಮಾತಿನ ಚಕಮಕಿ: ಪೊಲೀಸ್ ಅಧಿಕಾರಿಗಳು ಕನ್ನಡಪರ ಸಂಘಟನೆಗಳ ಮುಖಂಡರನ್ನು ರೈಲ್ವೆ ನಿಲ್ದಾಣದ ಒಳಗೆ ಬಿಡದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೀವುಗಳು ಒಳಗಡೆ ಹೋಗುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಹಾಗೂ ರೈಲ್ವೆ ನಿಲ್ದಾಣದ ಒಳಗಡೆ ಹೈಟೆನ್ಶನ್ ಕೇಬಲ್ ಇರುವುದರಿಂದ ಪ್ರತಿಭಟನಕಾರರಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ಕನ್ನಡ ಪರ ಹೋರಾಟಗಾರರ ಗಮನಕ್ಕೆ ತಂದರು. ಆಗ ವಾಟಾಳ್ ನಾಗರಾಜ್ ಅವರು ಅಧಿಕಾರಿಗಳೊಂದಿಗೆ ಮಾತನಾಡಿ ಶಾಂತಿಯುತವಾಗಿ ರೈಲ್ವೆ ನಿಲ್ದಾಣದ ಒಳಗಡೆ ಧರಣಿ ನಡೆಸುತ್ತೇವೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಅಧಿಕಾರಿಗಳು ರೈಲ್ವೆ ನಿಲ್ದಾಣದ ಒಳಗಡೆ ಹೋಗಲು ಅನುಮತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News