‘ಥಾಮಸ್ ಕೊಲೆ ಆರೋಪಿಗಳನ್ನು ಬಂಧಿಸಿ’
ಬೆಂಗಳೂರು, ಮಾ.26: ಕಳೆದ ಮೂರು ವರ್ಷಗಳ ಹಿಂದೆ ಈಸ್ಟರ್ ಹಬ್ಬದ ರಾತ್ರಿ ನಡೆದ ಥಾಮಸ್ ಕೊಲೆ ಪ್ರಕರಣದ 2ನೆ ಪಟ್ಟಿಯ ದೋಷಾರೋಪಿಗಳನ್ನು ಬಂದಿಸುವಲ್ಲಿ ಯಶವಂತಪುರ ಪೊಲೀಸರು ವಿಫಲರಾಗಿದ್ದಾರೆ ಎಂದು ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ಫೋರಂ(ಐಸಿಯುಎಫ್) ಅಧ್ಯಕ್ಷ ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಂತರ ಪೊಲೀಸರು ಡಿ.28, 2015 ರಂದು ನ್ಯಾಯಾಲಯಕ್ಕೆ 2ನೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಅನ್ಬು ಖಾನ್, ಎ.ಥಾಮಸ್, ಸೆಲ್ವರಾಜ್ ಅಲಿಯಾಸ್ ಚಸರ, ಬಿ.ಎ.ಆಂಥೋಣಿ ಇವರುಗಳಿಗೆ ಜಾಮೀನು ರಹಿತ ಬಂಧನದ ಆದೇಶವನ್ನು ನೀಡಲಾಗಿತ್ತು.
ಆದರೆ ಆದೇಶ ನೀಡಿ 4 ತಿಂಗಳುಗಳು ಕಳೆದಿವೆ, ಇವರು ಬಹಿರಂಗವಾಗಿ ತಿರುಗಾಡುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೂ ಪೊಲೀಸರು ಇವರನ್ನು ಬಂಧಿಸುವುದಕ್ಕೆ ಮುಂದಾಗುತ್ತಿಲ್ಲ. ಬದಲಿಗೆ ನಾವು ನೀಡಿದ ದೂರಿಗೆ ಪ್ರತಿಕ್ರಿಯಿಸಿ, ಆರೋಪಿಗಳು ಜಾಮೀನು ರಹಿತ ವಾರೆಂಟಿನ ವಿಷಯವನ್ನು ಮೊದಲೇ ತಿಳಿದುಕೊಂಡು ಪರಾರಿಯಾಗಿದ್ದಾರೆ ಎಂದು ಸುಳ್ಳು ಹೇಳಲಾಗಿದೆ. ಹಾಗೂ ಹಿಂಬರಹವನ್ನು ತಿದ್ದಿ 19ಕ್ಕೆ ತಯಾರಾದ ಪತ್ರವನ್ನು 10ಕ್ಕೆ ನೀಡಲಾಗಿದೆ ಎಂದು ದೂರಿದರು.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಸಿ.ಸೆಲ್ವರಾಜ್ ಅಲಿಯಾಸ್ ಚಸರ ಮಾ.16 ಕ್ಕೆ ಮರಣ ಹೊಂದಿದರು. ಈ ಸಂದರ್ಭದಲ್ಲಿ ಎಲ್ಲ ಆರೋಪಿಗಳು ಇಲ್ಲಿ ಹಾಜರಿದ್ದರು. ಆದರೂ ಪೊಲೀಸರು ಬಂದಿಸಿಲ್ಲ. ಇದು ಉದ್ದೇಶಪೂರ್ವಕವಾಗಿ ಮತ್ತು ಕೆಲವು ಪ್ರಭಾವಿ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಆರೋಪಿಗಳನ್ನು ರಕ್ಷಿಸಲಾಗುತ್ತಿದೆ. ಆದುದರಿಂದ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಭಾರತೀಯ ಕ್ಯಾಥೋಲಿಕ್ ಯೂನಿಯನ್ ಫ್ರಂಟ್ ಕಾರ್ಯದರ್ಶಿ ಅರುಣ್ ಫೆರ್ನಾಂಡಿಸ್, ಐಸಿಯುಎಫ್ ಕಾರ್ಯದರ್ಶಿ ಐಡಾ ಮಾರ್ಗರೇಟ್ ಡಿ.ಕುನ್ಹಾ, ಉಪಾಧ್ಯಕ್ಷ ಸಿಲ್ವೆನ್ ನೊರೊನ್ಹಾ, ಕರ್ನಾಟಕ ಕ್ರಿಸ್ತ ಯುವಕರ ಬಳಗದ ಕಾರ್ಯದರ್ಶಿ ರೋಷನ್ ಇನ್ನಿತರರು ಉಪಸ್ಥಿತರಿದ್ದರು.