ಹಾಸನ: ಮೈ ಮೇಲೆ ಕಸ ಸುರಿದುಕೊಂಡು ಧರಣಿ
ಹಾಸನ, ಮಾ. 26: ಪೌರ ಕಾರ್ಮಿಕರಿಗೆ ನಿವೇಶನ ಮತ್ತು ಮನೆ ನೀಡಲು ಒತ್ತಾಯಿಸಿ ಅಂಬೇಡ್ಕರ್ ಯುವಸೇನೆ ನೇತೃತ್ವದಲ್ಲಿ ತ್ಯಾಜ್ಯ ವಿಲೇವರಿ ಸ್ಥಳದಲ್ಲಿ ಪೌರಕಾರ್ಮಿಕರು ದೇಹದ ಮೇಲೆ ಕಸ ಸುರಿದುಕೊಂಡು ಧರಣಿ ನಡೆಸಿದರು.
ಶುಕ್ರವಾರ ಬೆಳಗ್ಗೆ ನಗರದ ಸಂತೆ ಪೇಟೆ ಸಮೀಪದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೌರ ಕಾರ್ಮಿಕರು ದೇಹದ ಮೇಲೆ ಕಸ ಸುರಿದುಕೊಂಡು ಆಕ್ರೋಶವ್ಯಕ್ತಪಡಿಸಿದ್ದಾರೆ. ಪೌರಕಾರ್ಮಿಕರಿಗೆ ನಿವೇಶನ, ಖಾಯಂ ಕೆಲಸ, ಆರೋಗ್ಯಕ್ಕೆ ಆದ್ಯತೆ, ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಆರ್‌ಟಿಇ ಮುಲಕದಾಖಲಾತಿ ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಅಂಬೇಡ್ಕರ್ ಯುವಸೇನೆ ರಾಜ್ಯ ಕಾರ್ಯಾಧ್ಯಕ್ಷ ನಾಗರಾಜ್ ಹೆತ್ತೂರು ಮಾತನಾಡಿ, ನಗರದಲ್ಲಿ ಸುಮಾರು 100 ಹೆಚ್ಚು ಖಾಯಂ ಪೌರ ಕಾರ್ಮಿಕ ಕುಟುಂಬಗಳಿದ್ದು, 300ಕ್ಕೂ ಹೆಚ್ಚು ಜನರು ನಗರದ ನಿರ್ಮಲ ನಗರ (ಮಟನ್ ಮಾರ್ಕೆಟ್ ಹಿಂಭಾಗ) ಮತ್ತು ಚಿಕ್ಕನಾಳು ಬಡಾವಣೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಲ್ಲಿಯವರೆಗೂ ನಿವೇಶನ ಮಂಜೂರು ಮಾಡಿಲ್ಲ ಎಂದರು.
ನಿತ್ಯ ಚರಂಡಿ-ರಸ್ತೆ-ಕಸದ ತೊಟ್ಟಿ ಸ್ವಚ್ಛಗೊಳಿಸಿ ನಗರವನ್ನು ಸುಂದರವಾಗಿಡುವ ಪೌರ ಕಾರ್ಮಿಕರಿಗೆ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಒಂದು ನಿವೇಶನ ಅಥವಾ ಮನೆ ನೀಡಿಲ್ಲ. ಅವರು ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ, ಜಿಲ್ಲಾಡಳಿತ ಹಾಗೂ ನಗರಸಭೆಯ ವೈಫಲ್ಯವೇ ಇದಕ್ಕೆ ಕಾರಣವಾಗಿದ್ದು ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ-ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬೇಕು ಎಂದು ನಾಗರಾಜ್ ಹೇಳಿದರು.
ಪೌರ ಕಾರ್ಮಿಕರಿಗೆ ನಿವೇಶನ ನೀಡಿ ಗೃಹ ಭಾಗ್ಯ ಯೋಜನೆಯಡಿ ಮನೆ ಕಟ್ಟುವಂತೆ ಸಾಲ ಸೌಲಭ್ಯ ಒದಗಿಸಿ ಈ ಸಂಬಂಧ ಸಹಾಯಧನವನ್ನು ನೀಡುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲೂ ತೀರ್ಮಾನವಾಗಿದೆ. ಸರಕಾರಿ ಆದೇಶ ಇದ್ದರೂ ಹಾಸನದಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಮೀನ ಮೇಷ ಎಣಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಟ್ಟೆಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಗೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಪೌರ ಕಾರ್ಮಿಕರಿಗೆ ನೀಡಬೇಕೆಂದು ತೀರ್ಮಾನಿಸಲಾಗಿದ್ದರೂ ಈ ಜಾಗವನ್ನು ನೀಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ ಎಂದು ಅವರು ದೂರಿದರು.
ಇನ್ನು ಒಂದು ವಾರದಲ್ಲಿ ಜಿಲ್ಲಾಡಳಿತ ಪೌರ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಬೇಕು. ಇಲ್ಲದಿದ್ದಲ್ಲಿ ಮಲ ಸುರಿದುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಾಜ್ ಎಚ್ಚರಿಸಿದರು.
ಹಾಸನ ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಜಿ.ಒ.ಮಹಾಂತಪ್ಪ, ಪೌರ ಕಾರ್ಮಿಕ ನಲ್ಲಪ್ಪ, ಮಲ್ನಾಡ್ ಮೆಹಬೂಬ್ ಮತ್ತಿತರರು ಹಾಜರಿದ್ದರು.