ಎ.1ರಿಂದ ಸಿಇಟಿ ತರಬೇತಿ ಕಾರ್ಯಕ್ರಮ ಪ್ರಸಾರ
ಬೆಂಗಳೂರು, ಮಾ.26: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ವರ್ಷ ಸಿಇಟಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ‘ವಿಕಸನ’ ತರಬೇತಿ ಕಾರ್ಯಕ್ರಮವನ್ನು ನಿರ್ಮಿಸಿ ದೂರದರ್ಶನ ‘ಚಂದನ’ ವಾಹಿನಿಯ ಮುಖಾಂತರ ಪ್ರಸಾರ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎ.1ರಿಂದ 30 ದಿನಗಳ ಕಾಲ ಸತತವಾಗಿ ಪ್ರತಿ ದಿನ 2 ಗಂಟೆಗಳ ಕಾರ್ಯಕ್ರಮ ಪ್ರಸಾರವಾಗಲಿದೆ.
ಬೆಳಗ್ಗೆ 8 ರಿಂದ 9 ಗಂಟೆವರೆಗೆ ಮತ್ತು ರಾತ್ರಿ 10:30 ರಿಂದ 11:30 ಗಂಟೆವರೆಗೆ ಪ್ರಸಾರವಾಗುವ ಈ ತರಬೇತಿ ಕಾರ್ಯಕ್ರಮದ ಮೂಲಕ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಬೇಕಾದ ಆತ್ಮವಿಶ್ವಾಸ ತುಂಬುವುದರೊಂದಿಗೆ ಬಹು ಉತ್ತರಗಳ ಪ್ರಶ್ನೆಗಳನ್ನು ಯಶಸ್ವಿಯಾಗಿ ಹೀಗೆ ಉತ್ತರಿಸಬೇಕೆಂಬ ಹಲವು ವಿಧಾನಗಳನ್ನು ನುರಿತ ತಜ್ಞರಾದ ಉಪನ್ಯಾಸಕರ ಮೂಲಕ ತಿಳಿಸಿಕೊಡಲಾಗುತ್ತದೆ.
ಪ್ರಮುಖವಾಗಿ ಗ್ರಾಮಾಂತರ ಪ್ರದೇಶಗಳ ಪ್ರತಿಭಾವಂತ ಬಡ ವಿದ್ಯಾಥಿಗಳು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯುವಂತೆ ಸನ್ನದ್ಧಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ತಲಾ 15 ತರಗತಿಗಳನ್ನು (ಎಪಿಸೋಡ್) ಪ್ರಸ್ತುತಪಡಿಸಿ ಪ್ರಸಾರ ಮಾಡಲಾಗುತ್ತದೆ. ಯಾವುದೇ ಕಾರಣದಿಂದ ಕಾರ್ಯಕ್ರಮ ವೀಕ್ಷಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾದರೂ ಕೂಡ ಅನುಕೂಲವಾಗುವಂತೆ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಈ ತರಗತಿಗಳ ವೀಡಿಯೊ ಕ್ಲಿಪ್ ಮತ್ತಿತರ ಪೂರ್ಣ ವಿವರಗಳನ್ನು ಒದಗಿಸಲಾಗುತ್ತದೆ.
1.78 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವರ್ಷ ಸಿಇಟಿ ಪರೀಕ್ಷೆ ಬರೆಯುತ್ತಿದ್ದು ಎಲ್ಲರೂ ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.