ಸವಿತಾ ಸಮುದಾಯವನ್ನು ಪ್ರವರ್ಗ 1ಎಗೆ ಸೇರಿಸಲು ಆಗ್ರಹ
ಬೆಂಗಳೂರು, ಮಾ.26: ಸವಿತಾ ಸಮುದಾಯವನ್ನು ಹಿಂದುಳಿದ ಸಮುದಾಯವೆಂದು ಗುರುತಿಸಿ 2ಎಯಿಂದ ಬೇರ್ಪಡಿಸಿ ಪ್ರವರ್ಗ 1ಎಗೆ ಸೇರಿಸಬೇಕೆಂದು ಕರ್ನಾಟಕ ರಾಜ್ಯ ಸವಿತಾ ಸಮಾಜ ಅಧ್ಯಕ್ಷ ಎನ್.ಸಂಪತ್ ಕುಮಾರ್ ಆಗ್ರಹಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತಾ ಸಮುದಾಯ ಇಂದು ತೀರಾ ಹಿಂದುಳಿದಿದೆ. ಈ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಈಗಾಗಲೇ ಪ್ರವರ್ಗ 2ಎನಲ್ಲಿ ಹಲವು ಬಲಿಷ್ಠ ಜಾತಿಗಳಿವೆ. ಇದರಿಂದಾಗಿ ಅತೀ ಸಣ್ಣದಾಗಿರುವ ನಮ್ಮ ಸಮುದಾಯ ಇದರ ಎದುರು ಹೋರಾಡಲು ಸಾಧ್ಯವಾಗುತ್ತಿಲ್ಲ. ಇವುಗಳ ಮಧ್ಯೆ ನಮಗೆ ಸಿಗಬೇಕಾದ ಯಾವ ಮೀಸಲಾತಿಯೂ ಸಿಗುತ್ತಿಲ್ಲ. ಆದುದರಿಂದ ಸವಿತಾ ಸಮುದಾಯವನ್ನು ಬೇರ್ಪಡಿಸಿ ಪ್ರವರ್ಗ 1 ಎನಲ್ಲಿ ಸೇರಿಸಬೇಕು ಎಂದು ಕೋರಿದರು.
ಅದೇ ರೀತಿಯಲ್ಲಿ ನಮ್ಮ ಸಮುದಾಯದವರನ್ನು ‘ಹಜಾಮ’ ಎಂಬುದಾಗಿ ಜಾತಿ ನಿಂದನೆ ಮಾಡುವುದು ವ್ಯಾಪಾರಗಿದೆ. ಆದುದರಿಂದಾಗಿ ಸರಕಾರ ಜಾತಿ ನಿಂದನೆಯಿಂದ ನಮಗೆ ಮುಕ್ತಿ ದೊರಕಿಸಿ ಕೊಡಲು ‘ಜಾತಿ ನಿಂದನೆ ಕಾಯ್ದೆ’ ಜಾರಿ ಮಾಡಬೇಕು. ಹಾಗೂ ಕ್ಷೌರಿಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.