×
Ad

ಬುಡಕಟ್ಟು ಜನರ ಸಂಕಷ್ಟದ ಬದುಕು: ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರ

Update: 2016-03-27 22:20 IST

ಮಡಿಕೇರಿ, ಮಾ.27: ಪ್ರಸಿದ್ಧ ನಾಗರಹೊಳೆ ಅಭಯಾರಣ್ಯ ಸೇರಿದಂತೆ ವಿವಿಧ ರಕ್ಷಿತಾರಣ್ಯಗಳಲ್ಲಿ ತಲೆ ತಲಾಂತರಗಳಿಂದ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳ ಬದುಕನ್ನು ಹಸನಾಗಿಸಲು ನೂರಾರು ಯೋಜನೆಗಳಿದ್ದರೂ, ಪ್ರಾಮಾಣಿಕವಾಗಿ ಅವುಗಳು ತಲುಪದೆ ಇಂದಿಗೂ ಗಿರಿಜನ ಸಮೂಹ ನಾಗರಿಕ ಸಮೂಹ ತಲೆತಗ್ಗಿಸುವಂತಹ ಹೀನ ಬದುಕನ್ನು ಕಾಣುತ್ತಿವೆ.


ಸರಕಾರದ ಅರಣ್ಯ ನೀತಿಗಳು, ಅಭಿವೃದ್ಧಿಯ ಸ್ಪಷ್ಟ ಚಿತ್ರಣಗಳಿಲ್ಲದ ಆಡಳಿತ ವ್ಯವಸ್ಥೆಗಳಿಂದ ಆದಿವಾಸಿಗಳು ತಮ್ಮ ಸಂಸ್ಕೃತಿಯ ಸಂರಕ್ಷಣೆ, ಸೂಕ್ತ ನೆಲೆ, ಬದುಕಿಗೆ ಭದ್ರತೆಗಳಿಲ್ಲದ ಸಂಕೀರ್ಣ ಸಮಸ್ಯೆಗಳ ನಡುವೆ ಸಿಲುಕಿದ್ದಾರಾದರೂ ಅದನ್ನು ಗಂಭೀರವಾಗಿ ಪರಿಗಣಿಸುವ ವ್ಯವಸ್ಥೆ ಮಾತ್ರ ಇಲ್ಲದಿರುವುದು ದುರ್ವಿಧಿ.
ಶಿಕ್ಷಣದ ಮೂಲಕ ಸಬಲೀಕರಣವೆನ್ನುವ ಚಿಂತನೆಯಡಿ 1952ರಿಂದಲೇ ಆಶ್ರಮ ಶಾಲೆಗಳ ವ್ಯವಸ್ಥೆಯನ್ನು ಗಿರಿಜನರಿಗಾಗಿ ಆರಂಭಿಸಲಾಗಿದೆ. ರಾಜ್ಯವ್ಯಾಪಿ 116 ಗಿರಿಜನ ಆಶ್ರಮ ಶಾಲೆಗಳು 12 ಸಾವಿರ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ಒದಗಿಸುವ ಸಾಮರ್ಥ್ಯ ಹೊಂದಿವೆ. ಕೊಡಗಿನಲ್ಲೂ 12ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆಯಾದರು ಹೇಗೆ? ಎನ್ನುವ ಪ್ರಶ್ನೆ ಕಾಡುತ್ತದೆ.
 ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಗಿರಿಜನ ಆಶ್ರಮ ಶಾಲೆಗಳಿಗೂ ಶಿಕ್ಷಣ ಇಲಾಖೆಗೂ ಯಾವುದೇ ಸಂಬಂಧಗಳಿಲ್ಲ. ಶಿಕ್ಷಣ ಕೌಶಲ್ಯ, ಸಾಮರ್ಥ್ಯವಿಲ್ಲದ ಐಟಿಡಿಪಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳೇ ಆಶ್ರಮ ಶಾಲೆಗಳನ್ನು ನಿರ್ವಹಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ತತ್ಪರಿಣಾಮ ಈ ಶಾಲೆಗಳಲ್ಲಿ ಖಾಯಂ ಶಿಕ್ಷಕರಾಗಲಿ, ಅಗತ್ಯ ಸಹ ಸಿಬ್ಬಂದಿಯಾಗಲಿ, ಶಿಕ್ಷಣಕ್ಕೆ ಅಗತ್ಯವಾದ ಪರಿಕರಗಳಾಗಲಿ, ಬೋಧನೆಗೆ ಸಂಬಂಧಿಸಿದ ನಿಯಮಗಳಾಗಲಿ ಇಲ್ಲ.
ಇನ್ನು ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಶುದ್ಧ ಕುಡಿಯುವ ನೀರು, ವ್ಯವಸ್ಥಿತ ಶೌಚಾಲಯ, ಸ್ನಾನದ ಮನೆ, ಊಟದ ಮನೆ, ಅಡುಗೆ ಮನೆ, ಮಲಗುವ ಕೋಣೆಗಳ ಕೊರತೆ ಎದ್ದು ಕಾಣುತ್ತದೆಯಾದರೆ, ಸೌಲಭ್ಯಗಳಿದ್ದರೂ ನಿರ್ವಹಣೆ ಇಲ್ಲದೆ ಆಶ್ರಮ ಶಾಲೆಗಳಲ್ಲಿ ಅತ್ಯಂತ ಅನಾರೋಗ್ಯಕರ ವಾತಾವರಣವಿದೆ.
ಕೆಲ ಆಶ್ರಮ ಶಾಲೆಗಳಲ್ಲಿ ಮಕ್ಕಳ ವೈಯಕ್ತಿಕ ಸ್ವಚ್ಛತೆಗೆ ಪೂರಕವಾಗಿ ಸ್ನಾನಕ್ಕೆ ಬಿಸಿನೀರು, ಸಾಬೂನು ಮತ್ತು ಮಕ್ಕಳ ಬಟ್ಟೆಯನ್ನು ಸ್ವಚ್ಛ
ಗೊಳಿಸುವ ಸಮರ್ಪಕ ವ್ಯವಸ್ಥೆಗಳಿಲ್ಲದೆ ಮಕ್ಕಳು ಕಜ್ಜಿ, ಚರ್ಮರೋಗಗಳಿಂದ ಬಳಲುವಂತಹ ಕೆಟ್ಟ ವ್ಯವಸ್ಥೆಗಳಿದೆ ಎನ್ನುತ್ತಾರೆ. ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಪ್ರಮುಖರು. ಆದಿವಾಸಿ ಯುವತಿಯರು ಹಾಗೂ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಪೌಷ್ಟಿಕ ಆಹಾರ ಮತ್ತು ಚಿಕಿತ್ಸೆ ಸಿಗದೆ ದಿನ ದೂಡುತ್ತಿದ್ದಾರೆ.
ಒಕ್ಕೂಟದ ಬೆೇಡಿಕೆಗಳು:  
 
ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಆಶ್ರಮ ಶಾಲೆಗಳ ಸುಧಾರಣೆಗಾಗಿ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು, ನವೋದಯ ವಸತಿ ಶಾಲೆಗಳಂತೆ ಆಶ್ರಮ ಶಾಲೆಗಳಲ್ಲಿ 1ರಿಂದ ಪಿಯುಸಿಯವರೆಗೆ ಶಿಕ್ಷಣ ಪಡೆಯಲು ಅವಕಾಶ ಇರಬೇಕು. ಕೇರಳ ಮಾದರಿಯ ವಸತಿ ಶಾಲೆಯ ಪ್ರಾರಂಭಕ್ಕೆ 10 ಎಕರೆ ಭೂಮಿಯನ್ನು ಗುರುತಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು, ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆಹಾರ, ವಸತಿ ಮತ್ತು ಶಿಕ್ಷಣ ಸಂಬಂಧಿ ವ್ಯವಸ್ಥೆಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಿಸಬೇಕೆಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News