ಅಂಬೇಡ್ಕರ್ ಪ್ರತಿಮೆ ಅನಾವರಣ ಕುರಿತು ಮೇಯರ್‌ಗೆ ಪತ್ರ
ಶಿವಮೊಗ್ಗ, ಮಾ.27: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕುರಿತಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಅವರಿಗೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.
ಎ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸುವ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಡಾ.ಬಿ.ಆರ್.ಆಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಈಗಾಗಲೇ ಎಲ್ಲ ತಯಾರಿ ನಡೆದಿದ್ದು ಸ್ಥಾಪನೆ ದಿನಾಂಕ ನಿಗದಿಗೊಳಿಸುವುದೂ ಸೇರಿದಂತೆ ವಿವಿಧ ಮಾಹಿತಿಗಾಗಿ ಮೇಯರ್ ಅವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಪ್ರತಿಮೆ ಸ್ಥಾಪನೆ ವಿಳಂಬವಾಗಿರುವುದು ನಿಜ. ಆದರೆ ಪಾಲಿಕೆಯ ನಿರ್ಧಾರಗಳು ಏನು ಎಂಬುದನ್ನು ತಿಳಿಯಬೇಕಿದೆ. ಎ.14ರೊಳಗೆ ಅಥವಾ ಆಸುಪಾಸಿನಲ್ಲಿ ಆಗುವುದಾದರೆ ಆ ಸಮಾರಂಭವನ್ನೂ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎ.14ರಂದು ಸಂವಿಧಾನ ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅಂದು ಬೆಳಗ್ಗೆ 9ಗಂಟೆಗೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ನಗರದ ಸೈನ್ಸ್ ಮೈದಾನದಿಂದ ವಿವಿಧ ರಾಜಬೀದಿಗಳಲ್ಲಿ ವಿವಿಧ ಜಾನಪದ ವಾದ್ಯ ತಂಡಗಳೊಂದಿಗೆ ಮೆರವಣಿಗೆ ಮಾಡಲಾಗುವುದು. ಬೆಳಗ್ಗೆ 11ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸರಕಾರಿ ಶಿಷ್ಟಾಚಾರದೊಂದಿಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಹಾಗೂ ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿನೀಡುವ ಪ್ರದರ್ಶಕಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.
ದಲಿತ ವಚನಕಾರರ ಜಯಂತಿ: ಎ.14ರಂದೆ ಮಧ್ಯಾಹ್ನ ಅದೇ ವೇದಿಕೆಯಲ್ಲಿ ದಲಿತ ವಚನಕಾರರ ಜಯಂತಿಯನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದರು.
ದಲಿತ ವಚನಕಾರರ ಜಯಂತಿ ಆಚರಿಸುವಂತೆ ಇದೇ ಮೊದಲಬಾರಿಗೆ ಸರಕಾರಿ ಆದೇಶವಿದ್ದು ಈ ಆಚರಣೆಯನ್ನು ಅರ್ಥಪೂರ್ಣವಾಗಿ ಮಾಡಲಾಗುವುದು. ನಿರ್ದಿಷ್ಟ ದಲಿತ ವಚನಕಾರರ ವಚನಗಳನ್ನು ಜಿಲ್ಲೆಯ ಉತ್ತಮ ಗಾಯಕರಿಂದ ಹಾಡಿಸುವ ಮೂಲಕ ವಚನಕಾರರ ಧೋರಣೆಯನ್ನು ಅರ್ಥಮಾಡಿಕೊಳ್ಳಲಾಗುವುದು ಹಾಗೂ ಗೌರವ ಸಮರ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಶಿವಮೊಗ್ಗ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಧರ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಮಂಗಳ ವೆಂ.ನಾಯಕ್ ಉಪಸ್ಥಿತರಿದ್ದರು.