ಅಕ್ರಮ ಮರಳು ಸಾಗಾಟ: ಚಾಲಕನ ಸಹಿತ ಲಾರಿ ವಶ
Update: 2016-03-27 22:33 IST
ಮೂಡಿಗೆರೆ, ಮಾ.27: ಕಳವು ಮಾಡಿ ಅಕ್ರಮ ಮರಳು ಸಾಗಾಟ ಮಾಡಿ ಸಂಗ್ರಹಿಸುತ್ತಿದ್ದ ಲಾರಿಯೊಂದನ್ನು ಚಾಲಕನ ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಗೋಣಿಬೀಡು ಠಾಣಾ ವ್ಯಾಪ್ತಿಯ ಅಣಜೂರು ಎಂಬಲ್ಲಿ ನಡೆದಿದೆ.
ಅಣಜೂರು ಬಳಿಯ ಹೇಮಾವತಿ ನದಿಪಾತ್ರದಲ್ಲಿ ಟ್ರಾಕ್ಟರ್ ಬಳಸಿ ಮರಳು ಕಳ್ಳತನ ಮಾಡಲಾಗುತ್ತಿತ್ತು. ಹೀಗೆ ಕಳವು ಮಾಡಿದ ಮರಳನ್ನು ಅಣಜೂರು ಗ್ರಾಮದಲ್ಲಿ ಸಂಗ್ರಹಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮರಳು ತುಂಬಿಸಿದ್ದ ಲಾರಿಯೊಂದನ್ನು ವಶಪಡಿಸಿಕೊಂಡಿದ್ದಾರೆ.
ಚಾಲಕ ಎ.ಎ.ಕಾರ್ತಿಕ್(27)ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳಾದ ಆದರ್ಶ್, ಅಣಜೂರು ಗಿರೀಶ್, ಚಂದ್ರಶೇಖರ್ ಅಲಿಯಾಸ್ ಭಟ್ ತಲೆಮರೆಸಿಕೊಂಡಿದ್ದಾರೆ. ಲಾರಿ ಸಹಿತ ಲಾರಿಯಲ್ಲಿದ್ದ ಸುಮಾರು 3,000 ರೂ. ವೌಲ್ಯದ ಮರಳನ್ನು ಗೋಣಿಬೀಡು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.