ಪ್ರತ್ಯೇಕ ಕಳವು ಪ್ರಕರಣ
ಚಿಕ್ಕಮಗಳೂರು, ಮಾ.27: ನಗರದ ಮೂರು ಕಡೆಗಳಲ್ಲಿ ಸರಣಿ ಕಳವು ಕೃತ್ಯ ನಡೆದಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಗರದ ಟಿಪ್ಪು ನಗರದ ಆಟೊ ಸ್ಟಾಂಡ್ ಬಳಿ ಮುಶೀರ್ ಅಹ್ಮದ್ ಎಂಬವರಿಗೆ ಸೇರಿದ ಮನೆಯಲ್ಲಿ ಕಳವು ಕೃತ್ಯ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಳ ನುಗ್ಗಿರುವ ಕಳ್ಳರು 78 ಸಾವಿರ ರೂ. ನಗದು ಹಾಗೂ 3.60 ಲಕ್ಷ ರೂ. ವೌಲ್ಯದ ಚಿನ್ನದ ಆಭರಣಗಳನ್ನು ಕಳವು ನಡೆಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಗರದ ಸಂತೆ ಮೈದಾನದ ಬಳಿಯ ನದೀಂ ಎಂಬವರ ಮನೆಯ ಆವರಣದಲ್ಲಿ ಕಳವು ನಡೆದಿದೆ. ಮನೆಯ ಹಿಂಭಾಗದಲ್ಲಿ ಇಟ್ಟಿದ್ದ 65 ಟೊಮೆಟೊ ತುಂಬುವ ಖಾಲಿ ಪ್ಲಾಸ್ಟಿಕ್ ಬಾಕ್ಸ್‌ಗಳು, ತೂಕದ ಹಳೆ, ಕಬ್ಬಿಣದ ಸ್ಕೇಲ್ ಹಾಗೂ ತೂಕದ ಕಲ್ಲುಗಳನ್ನು ಕಳವು ಮಾಡಲಾಗಿದೆ. ಕಳವಾದ ವಸ್ತುಗಳ ವೌಲ್ಯ ಸುಮಾರು 9,500 ರೂ. ಎಂದು ಅಂದಾಜಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ನಗರದ ಶರೀಫ್ ಗಲ್ಲಿಯ ಎಸ್.ಎಲ್.ಖಲೀಲ್ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಗೂಡ್ಸ್ ಆಟೊ ರಿಕ್ಷಾದ ಬ್ಯಾಟರಿ ಕಳವು ಮಾಡಲಾಗಿದೆ. ಕಳವಾದ ಬ್ಯಾಟರಿ ವೌಲ್ಯ ಸುಮಾರು 5,500 ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಮೂರು ಪ್ರಕರಣಗಳನ್ನು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.