×
Ad

ಲೋಕಾಯುಕ್ತ ದುರ್ಬಲಗೊಳಿಸುವ ಪ್ರಶ್ನೆಯೇ ಇಲ್ಲ ಸಿಎಂ ಸಿದ್ದರಾಮಯ್ಯ

Update: 2016-03-27 22:41 IST

ಹರಿಹರ,ಮಾ.27: ರಾಜ್ಯ ಸರಕಾರ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ ರಚನೆಯಿಂದ ಲೋಕಾಯುಕ್ತ ಸಂಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಹಾಗೂ ದುರ್ಬಲಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ನೂತನ ಕನಕ ಶಾಖಾ ಮಠದ ಉದ್ಘಾಟನೆ ಹಾಗೂ ಐಎಎಸ್, ಕೆಎಎಸ್ ತರಬೇತಿ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

ಎಸಿಬಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದವರು ಭ್ರಷ್ಟಾಚಾರ ನಿಗ್ರಹ ದಳ ಕುರಿತು ಅನವಶ್ಯಕ ಗೊಂದಲ ಸೃಷ್ಟಿಸಿ, ಜನರಿಗೆ ಈ ರೀತಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಮ್ಮ ಸರಕಾರ ಲೋಕಾಯುಕ್ತ ಸಂಸ್ಥೆಯ ಒಂದು ಅಕ್ಷರವನ್ನು ಸಹ ಬದಲಿಸಿಲ್ಲ. ಲೋಕಾಯುಕ್ತಕ್ಕೆ ಇಲ್ಲದ ತನಿಖಾಧಿಕಾರವನ್ನು ಎಸಿಬಿ ರಚಿಸಿ ಅದಕ್ಕೆ ನೀಡುತ್ತಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು. ರಾಜ್ಯಕ್ಕೆ ಎಸಿಬಿ ಹೊಸತು. ಆದರೆ, ಈಗಾಗಲೇ ದೇಶದ 15 ರಾಜ್ಯಗಳಲ್ಲಿ ಎಸಿಬಿ ವ್ಯವಸ್ಥೆ ಇದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಅದು ರಚನೆಯಾಗಲಿದೆ. ಭ್ರಷ್ಟಾಚಾರ ನಿಗ್ರಹ ದಳವನ್ನು 1991ರಲ್ಲಿಯೇ ಎಕ್ಸಿಕ್ಯೂಟಿವ್ ಆರ್ಡರ್ ಮೂಲಕ ರಚನೆ ಮಾಡಲಾಗಿತ್ತು. ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಎಸಿಬಿ ಎರಡೂ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ಎಸಿಬಿ ರಚನೆ ಬಗ್ಗೆ ನಮ್ಮ ರಾಜ್ಯದಲ್ಲಿ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ ಎಂದ ಅವರು, ಎಸಿಬಿ ರಚನೆಗೊಂಡರೂ ಲೋಕಾಯುಕ್ತ ಸಂಸ್ಥೆಗೆ ಈ ಹಿಂದೆ ಇರುವಂತಹ ಎಲ್ಲ ಅಧಿಕಾರ ಇರುತ್ತದೆ. ಎಸಿಬಿ ಅದಕ್ಕೆ ಪರ್ಯಾಯವಾಗಿ ತನ್ನದೇ ಕಾನೂನು ಮಿತಿಯಲ್ಲಿ ಅಧಿಕಾರ ನಿರ್ವಹಿಸಲಿದೆ ಎಂದರು.

ರಹಸ್ಯ ಮಾತುಕತೆ ನಡೆಸಿಲ್ಲ:

 ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ನಾನು ಯಾವುದೇ ರಹಸ್ಯ ಮಾತುಕತೆ ನಡೆಸಿಲ್ಲ. ಹೈ-ಕ ಅಭಿವೃದ್ಧಿ ಬಗ್ಗೆ ಔಪಚಾರಿಕವಾಗಿ ಚರ್ಚೆ ಮಾಡಿದ್ದೇನೆ. ಈ ಸಂದರ್ಭ ಕಲಬುರಗಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆ ಸೇರಿಸುವಂತೆ ಖರ್ಗೆ ಮನವಿ ಸಲ್ಲಿಸಿದ್ದು, ಬಿಟ್ಟರೆ ಮತ್ತಾವ ರಹಸ್ಯ ಮಾತುಕತೆ ನಡೆದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಕುಡಿಯುವ ನೀರಿಗೆ 100 ಕೋಟಿ ರೂ. ಬಿಡುಗಡೆ : ರಾಜ್ಯದ ಎಲ್ಲೆಡೆ ನೀರಿನ ಹಾಹಾಕಾರವಿದ್ದು, ಈಗಾಗಲೇ ಕುಡಿಯುವ ನೀರಿಗಾಗಿ 100 ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, ನಿರ್ವಹಣೆಗೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ನೇಮಿಸಿ ಸಮರ್ಪಕ ನೀರು ತಲುಪಿಸು ವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕಾ, ಕೆಎಸ್‌ಐಸಿ ಅಧ್ಯಕ್ಷ ಡಿ. ಬಸವರಾಜ್, ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News