×
Ad

ಆಯವ್ಯಯದಲ್ಲಿ ದಲಿತರಿಗೆ ಮೀಸಲಾದ ಅನುದಾನ ಸದ್ಬಳಕೆಗೆ ಕಾಳಜಿ ವಹಿಸಿ: ಪುರುಷೋತ್ತಮ್ ದಾಸ್

Update: 2016-03-27 23:24 IST

ಬೆಂಗಳೂರು, ಮಾ.27: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ದಲಿತ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆಯಾಗುವಂತೆ ಎಸ್ಸಿ-ಎಸ್ಟಿ ನೌಕರರು ಹಾಗೂ ದಲಿತ ಸಮುದಾಯದ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು ಎಂದು ಕೆನರಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಪುರುಷೋತ್ತಮ್‌ದಾಸ್ ಮನವಿ ಮಾಡಿದ್ದಾರೆ.
ರವಿವಾರ ದಲಿತ ಬಹುಜನ ಚಳವಳಿ ವತಿಯಿಂದ ನಗರದ ಜೈ ಭೀಮ್ ಭವನದಲ್ಲಿ ಆಯೋಜಿಸಿದ್ದ ‘ದಲಿತರು ಹಾಗೂ ಆಯವ್ಯಯ’ ಕುರಿತ ಪರಾಮರ್ಶೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತಕ ಆಯವ್ಯಯದಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸುಮಾರು 20ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆದರೆ, ಈ ಅನುದಾನ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆಯೆ ಎಂಬ ಅನುಮಾನ ಮೂಡಿದೆ. ಕಳೆದ ವರ್ಷದ ಆಯವ್ಯಯದಲ್ಲಿ ಬಿಡುಗಡೆಯಾದ ಅನುದಾನವು ಸರಿಯಾಗಿ ಬಳಕೆಯಾಗಿಲ್ಲ. ಹೀಗಾಗಿ 2016-17ರ ಅನುದಾನವನ್ನಾದರೂ ಪರಿಣಾಮಕಾರಿಯಾಗಿ ಬಳಕೆ ಆಗುವಂತೆ ಎಸ್ಸಿ-ಎಸ್ಟಿ ನೌಕರರು ಪಣ ತೊಡಬೇಕೆಂದು ಅವರು ಕರೆ ನೀಡಿದರು.
ಎಸ್ಟಿಪಿ-ಟಿಎಸ್ಪಿ ಉಪ ಯೋಜನೆಗಳಡಿ ಎಲ್ಲ ಇಲಾಖೆಗಳಿಗೆ ಮೂರು ವರ್ಷದಲ್ಲಿ 40,800ಕೋಟಿ ರೂ.ಬಿಡುಗಡೆಯಾಗಿದ್ದು, ಆಪೈಕಿ ಪ್ರಸಕ್ತ ಸಾಲಿನ ಜನವರಿ ಅಂತ್ಯಕ್ಕೆ ಒಟ್ಟು 28,386 ಕೋಟಿ ರೂ., ಅಂದರೆ ಶೇ.60ರಷ್ಟನ್ನು ಮಾತ್ರ ಖರ್ಚು ಮಾಡಲಾಗಿದೆ. ಇದಕ್ಕೆ ಕಾರಣ ಮನುವಾದಿ ಮನಸುಳ್ಳ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿಯೆ ದಲಿತ ಸಮುದಾಯಕ್ಕೆ ಮೀಸಲಾದ ಹಣವನ್ನು ಖರ್ಚು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
 ಹಿರಿಯ ಲೇಖಕ ಮಂಗ್ಳೂರು ವಿಜಯಾ ಮಾತನಾಡಿ, ಸರಕಾರಿ ಇಲಾಖೆಗಳಲ್ಲಿ ಎಸ್ಸಿ-ಎಸ್ಟಿ ಅನುದಾನಗಳು ಯಾವ ರೀತಿಯಲ್ಲಿ ಪ್ರಗತಿ ಸಾಧಿಸಿವೆ. ಯಾವ ಹೊಸ ಯೋಜನೆಗಳು ಜಾರಿಯಾಗಿವೆ. ಅದರ ಸಾಧಕ-ಬಾಧಕಗಳೇನು ಎಂಬುದರ ಕುರಿತು ವಿಶ್ಲೇಷನಾತ್ಮಕವಾಗಿ ಅಧ್ಯಯನ ಮಾಡವಂತಹ ಒಂದು ಸಮಿತಿಯನ್ನು ರಚನೆ ಮಾಡಬೇಕು. ಅದರ ಮೂಲಕದ ರಾಜ್ಯದ ದಲಿತ ಸಮುದಾಯಕ್ಕೆ ಮಾಹಿತಿಯನ್ನು ರವಾನಿಸಿ, ತಮ್ಮ ಹಕ್ಕುಗಳನ್ನು ಕೇಳುವಂತಾಗಬೇಕು ಎಂದು ತಿಳಿಸಿದರು.
ರಾಜ್ಯದ ಪ್ರತಿ ಹೋಬಳಿ ಮಟ್ಟದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗಿದೆ. ಆ ಭವನಗಳನ್ನು ಕೇವಲ ಅಂಬೇಡ್ಕರ್ ಜಯಂತಿ ಹಾಗೂ ಮನರಂಜನಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ಮಾಹಿತಿ ಕೇಂದ್ರವಾಗಿ ಮಾರ್ಪಡಿಸಬೇಕು. ಉನ್ನತ ಶಿಕ್ಷಣ, ಸ್ವಯಂ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯನ್ನು ನೀಡಬೇಕು ಎಂದು ಅವರು ತಿಳಿಸಿದರು.
ಎಸ್ಸಿ-ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಶಿವಶಂಕರ್ ಮಾತನಾಡಿ, ದಲಿತ ಸಮುದಾಯ ಸರ್ವತೋಮುಖ ಅಭಿವೃದ್ಧಿಗೆ ಹೋಬಳಿ ಮಟ್ಟದಲ್ಲಿ ಸಮನ್ವಯ ಅಧಿಕಾರಿಯನ್ನು ನೇಮಿಸಬೇಕು. ಆ ಮೂಲಕ ವಿವಿಧ ಇಲಾಖೆಗಳಲ್ಲಿ ದಲಿತ ಸಮುದಾಯದ ಅಭಿವೃದ್ಧಿಗಾಗಿ ಜಾರಿಯಲ್ಲಿರುವ ಕಾರ್ಯಕ್ರಮಗಳ ಮಾಹಿತಿ ನೀಡುವಂತಾಗಬೇಕು. ಇದರಿಂದ ದಲಿತ ಸಮುದಾಯದ ಪ್ರತಿಯೊಬ್ಬರಿಗೂ ಮಾಹಿತಿ ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿ ಶಿವರುದ್ರಪ್ಪ, ದಲಿತ ಮುಖಂಡ ವೆಂಕಟೇಶ್, ಹನುಮಂತರಾಯಪ್ಪ, ಮಂಜುಳಾ, ಅಮುಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News