×
Ad

ಯಾವ ಸರಕಾರವೂ ಪ್ರಾಮಾಣಿಕವಾಗಿಲ್ಲ: ಬಾಲಸುಬ್ರಮಣಿಯನ್

Update: 2016-03-27 23:24 IST

ಬೆಂಗಳೂರು, ಮಾ. 27: ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಯಾವ ಸರಕಾರಗಳೂ ಪ್ರಾಮಾಣಿಕವಾಗಿ ಉಳಿದಿಲ್ಲ. ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ಹೋರಾಟವೊಂದೇ ಪರಿಹಾರ ಎಂದು ರಾಜ್ಯ ಸರಕಾರ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಾಲಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಯುಸಿಇ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಏರ್ಪಡಿಸಿದ್ದ ‘ಕೆಪಿಎಸ್ಸಿಯಲ್ಲಿನ ಅಕ್ರಮಗಳು-ನೇಮಕಾತಿಯಲ್ಲಿನ ಭ್ರಷ್ಟಾಚಾರ ಉದ್ಯೋಗಾ ಕಾಂಕ್ಷಿಗಳ ಮುಂದಿರುವ ಸವಾಲುಗಳು’ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


1980ರಲ್ಲಿ ತಾನು ರೇಶ್ಮೆ ಇಲಾಖೆಯಲ್ಲಿ ನಿರ್ದೇಶಕನಾಗಿದ್ದೆ. ಆಗ 30ಜನ ಗೆಜೆಟೆಡ್ ಅಧಿಕಾರಿಗಳನ್ನು ನೇಮಕ ಮಾಡಬೇಕಿತ್ತು. ಹಣದ ಭ್ರಷ್ಟಾಚಾರ ಇರಲಿಲ್ಲ. ಆದರೆ, ಆಗ ಪ್ರಭಾವವನ್ನು ಬಳಸಲಾಗುತ್ತಿತ್ತು. ಇದನ್ನು ನಾವು ವಿರೋಧಿಸಿದ್ದೆವು. ನಂತರ 1999ರಲ್ಲಿ ರಾಜ್ಯ ಸರಕಾರದ ಪ್ರತಿನಿಧಿಯಾಗಿ ಹೊಸದಿಲ್ಲಿಯಲ್ಲಿದ್ದೆ. ಆಗ ಮುಖ್ಯಮಂತ್ರಿಗಳ ಜೊತೆ ಒಬ್ಬ ವ್ಯಕ್ತಿ ಬರುತ್ತಿದ್ದರು. ಅವರ ಜೊತೆ ಯಾವಾಗಲೂ ಬ್ರೀಫ್ ಕೇಸ್ ಇರುತ್ತಿತ್ತು. ನಂತರ ಅವರು ಕೆಪಿಎಸ್ಸಿಯ ಸದಸ್ಯರಾದರು. ಹೀಗೆ ಭ್ರಷ್ಟರ ಕೆಪಿಎಸ್ಸಿ ಪ್ರವೇಶದಿಂದ ನೇಮಕಾತಿಗಳಲ್ಲಿ ಅಕ್ರಮ ನಡೆಯುತ್ತಿವೆ ಎಂದರು. 2001ರಲ್ಲಿ ಶೇ.7ರಷ್ಟಿದ್ದ ನಿರುದ್ಯೋಗ ಸಮಸ್ಯೆ, 2011ರಲ್ಲಿ ಶೇ.10ರಷ್ಟಾಗಿದೆ. ಇದು ಸರಕಾರದ ಅಂಕಿ-ಅಂಶ. ಇದು ಸಂಪೂರ್ಣ ಸತ್ಯವಲ್ಲ. ಇನ್ನು ಲೆಕ್ಕಕ್ಕೆ ಸಿಗದೇ ಇರುವ ಅರೆ ಉದ್ಯೋಗಿಗಳು ಇದ್ದಾರೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಶೇ.18ರಷ್ಟು ಪದವೀಧರ ನಿರುದ್ಯೋಗಿಗಳಿದ್ದಾರೆ. ನಿರುದ್ಯೋಗ ಸೈನ್ಯ ದೇಶದಲ್ಲಿ ಬೆಳೆಯುತ್ತಿದೆ. ಈ ಸಮಸ್ಯೆಯ ವಿರುದ್ಧ ಯುವಜನ ಜಾಗೃತರಾಗಬೇಕೆಂದರು. ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಯುವಜನರಿಗೆ ಕೌಶಲ್ಯ ಇಲ್ಲ ಎಂಬ ಪ್ರಚಾರ ಸರಿಯಲ್ಲ. ಅರ್ಹರಿಗೆ ಉದೋಗ ಸಿಗುತ್ತಿಲ್ಲ. ಸರಕಾರಗಳು ಒಂದು ಹೋಗಿ ಇನ್ನೊಂದು ಬಂದರೆ ದೇಶ-ರಾಜ್ಯದಲ್ಲಿರುವ ಗಂಭೀರ ಸಮಸ್ಯೆಗಳಾದ ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಸಿಕ್ಕುವುದಿಲ್ಲ. ಈ ಸಮಸ್ಯೆಗಳ ವಿರುದ್ಧ ಬಲಿಷ್ಟ ಹೋರಾಟ ಬೆಳೆಯಬೇಕು ಎಂದರು.
 ಕನ್ಹಯ್ಯ ಕುಮಾರನಂತಹ ಹೋರಾಟಗಾರರು ಹುಟ್ಟಬೇಕಾಗಿದೆ. ಹೋರಾಟದ ದಾರಿಯಲ್ಲಿ ಹಲವಾರು ಅಡೆತಡೆಗಳಿರುತ್ತವೆ. ಹೋರಾಟವನ್ನು ಅಪಮೌಲ್ಯ ಗೊಳಿಸುವ ಜನರಿರುತ್ತಾರೆ. ಅದನ್ನು ಅರಿತು ದೃಢಸಂಕಲ್ಪದಿಂದ ಹೋರಾಟಪರ ಇರುವ ಜನರನ್ನು ಮುಂದಿಟ್ಟುಕೊಂಡು ಬಲಿಷ್ಟ-ಸುದೀರ್ಘ ಆಂದೋಲನ ಕಟ್ಟಬೇಕೆಂದರು.
ಹೋಟಾ ಸಮಿತಿಯ ಶಿಫಾರಸುಗಳು ಚೆನ್ನಾಗಿವೆ. ಆದರೆ ಅವುಗಳ ಜಾರಿಗೆ ಒತ್ತಡ ಬೇಕಿದೆ. ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರು ತಪ್ಪಿತಸ್ಥರೆಂದು ಸರಕಾರದ ಕ್ಯಾಬಿನೆಟ್ ನಿರ್ಧಾರ ಮಾಡಿದೆ, ಸಿಐಡಿ ವರದಿ ನೀಡಿದೆ. ಅದರೆ ಆ ಕಳಂಕಿತರೆ 2014ರಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ಸಂದರ್ಶನ ಮಾಡುತ್ತಾರೆ. ಇದು ನಮ್ಮ ವ್ಯವಸ್ಥೆಯಾಗಿದೆ. ಇದರ ವಿರುದ್ಧ ಯುವಕರು ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಎಐಡಿವೈಒ ಅಧ್ಯಕ್ಷ ಡಾ.ಬಿ.ಆರ್.ಮಂಜುನಾಥ್ ಮಾತನಾಡಿ, ಉದ್ಯೋಗ ಯುವಜನರ ಮೂಲಭೂತ ಹಕ್ಕು. ಆ ಹಕ್ಕನ್ನು ಪಡೆದುಕೊಳ್ಳಲು ಸರಿಯಾದ ಸಂಘಟನೆ, ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಹೋರಾಟಕ್ಕೆ ಧುಮುಕಬೇಕೆಂದು ಕರೆ ನೀಡಿದರು.
1950ರ ದಶಕದಲ್ಲಿ ವಿಶ್ವದಲ್ಲಿ ಹಲವಾರು ದೇಶಗಳು ಕಲ್ಯಾಣ ರಾಜ್ಯದ ಆರ್ಥಿಕ ಯೋಜನೆ ಮತ್ತು ಸಮಾಜವಾದಿ ಆರ್ಥಿಕ ಮಾದರಿ ಅನುಸರಿಸುತ್ತಿದ್ದವು. ಇದರಿಂದಾಗಿ ಕಾರ್ಮಿಕರ ಮತ್ತು ನಿರುದ್ಯೋಗಿ ಯುವಜನರ ಪರವಾದ ನೀತಿಗಳು ಜಾರಿ ಯಾಗಿದ್ದವು. ನಿರುದ್ಯೋಗಿಗಳಿಗೆ ಭತ್ತೆ ನೀಡಲಾಗುತ್ತಿತ್ತು. ಅಂದು ಇಂಗ್ಲೆಂಡ್‌ನಲ್ಲಿ ಒಂದು ಪೈಸೆ ಖರ್ಚಿಲ್ಲದೆ ಹೃದಯ ಚಿಕಿತ್ಸೆಯಂತಹ ರೋಗಗಳಿಗೆ ಚಿಕಿತ್ಸೆ ಸಿಗುತ್ತಿತ್ತು. ಆದರೆ, ಈಗ ಅದು ಇಲ್ಲ. ಆದರೆ ಸಮಾಜವಾದಿ ಕ್ಯೂಬಾದಲ್ಲಿ ಸಿಗುತ್ತಿದೆ. ಒಟ್ಟಾರೆಯಾಗಿ ಮಾನವೀಯ ಮುಖ ಇರುವ ಯೋಜನಾ ಬದ್ಧ ಆರ್ಥಿಕತೆ ಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಸರಕಾರವು ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಮಾಡುತ್ತಿಲ್ಲ. ಖಾಸಗಿ ಕ್ಷೇತ್ರದಲ್ಲೂ ಕೆಲಸ ಸಿಗದೆ ಯುವಜನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಪ-ಸ್ವಲ್ಪನಡೆಯುವ ನೇಮಕಾತಿಯಲ್ಲಿ ಭ್ರಷ್ಟಾಚಾರ- ಜಾತಿವಾದ ತಾಂಡವ ವಾಡುತ್ತಿದೆ ಎಂದು ದೂರಿದರು.
ಕೆಪಿಎಸ್ಸಿ ಭ್ರಷ್ಟರಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು. ಹೋಟಾ ಸಮಿತಿ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಗುತ್ತಿಗೆ-ಹೊರಗುತ್ತಿಗೆ ಪದ್ಧತಿ ಯನ್ನು ಕೈಬಿಡಬೇಕು. ನಿರುದ್ಯೋಗಿಗಳಿಗೆ ಭತ್ತೆ ನೀಡಬೇಕು ಎಂದು ಅವರು ಪ್ರತಿಪಾದಿಸಿದರು. ವೇದಿಕೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಜಿ.ಎಸ್. ಕುಮಾರ್, ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News