ಹಾಸನ: ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಮತ್ತೊಂದು ಬಲಿ
ಹಾಸನ, ಮಾ. 27: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಜೀವ ಬಲಿಯಾಗಿದ್ದು, ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯೆದುರು ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು.
ನಗರದ ಸಮೀಪ ಬಿಟ್ಟಗೌಡನಹಳ್ಳಿ ನಿವಾಸಿ ಗೌಡಯ್ಯ ಎಂಬವರ ಮಗ ಬಿ.ಜಿ.ರೇವಣ್ಣ ಅಲಿಯಾಸ್ ಗಿರೀಶ್ (42) ಆತ್ಮಹತ್ಯೆ ಮಾಡಿಕೊಂಡವರು.
ಡಿವೈಎಫ್‌ಐ ಸೇರಿದಂತೆ ನಾನಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಗಿರೀಶ್, ಏಜೆನ್ಸಿ ನಡೆಸುವ ನಿಟ್ಟಿನಲ್ಲಿ ಹಲವಾರು ಜನರಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದರು. ಕಳೆದ ಎರಡು ವರ್ಷಗಳಿಂದ ಬಡ್ಡಿ ರೂಪದಲ್ಲಿ ಹಣ ನೀಡಲಾಗುತ್ತಿದ್ದರೂ ಕೆಲ ದಿವಸಗಳಿಂದ ಏಜೆನ್ಸಿ ನಷ್ಟ ಆಗುವುದು ಕಂಡು ಬಂತು. ಸಾಲ ಪಡೆದವರಿಗೆ ಬಡ್ಡಿ ನೀಡಲು ಸಾಧ್ಯವಾಗದಿದ್ದರಿಂದ ಬಡ್ಡಿ ಮತ್ತು ಹಣಕ್ಕಾಗಿ ಸಾಲ ಕೊಟ್ಟವರು ಕಿರುಕುಳ ನೀಡಲು ಪ್ರಾರಂಭಿಸಿದರು. ಕುಟುಂಬದವರಿಗೂ ಸೇರಿ ದೂರವಾಣಿ ಮೂಲಕ ಹಲ್ಲೆ ಹಾಗೂ ಪ್ರಾಣ ಬೆದರಿಕೆ ಹಾಕಿದ್ದರಿಂದ ಹಿಂಸೆ ತಾಳಲಾರದೆ ಗಿರೀಶ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ ವಿಷ ಕುಡಿದು ಎಂದಿನಂತೆ ಮನೆಗೆ ಬಂದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಗಿರೀಶ್ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್, ಸಿಪಿಎಂ ಮುಖಂಡ ಶ್ರೀರಾಮರೆಡ್ಡಿ, ವರಲಕ್ಷ್ಮೀ, ಧರ್ಮೇಶ್, ನವೀನ್ ಮತ್ತಿತರರು ಭೇಟಿ ನೀಡಿದರು.