×
Ad

ಟ್ರಾಕ್ಟರ್‌ಗೆ ಲಾರಿ ಢಿಕ್ಕಿ: ಆರು ಮಂದಿ ಮೃತ್ಯು

Update: 2016-03-27 23:55 IST

ವಿಜಯಪುರ(ಬಿಜಾಪುರ), ಮಾ.27: ಶರವೇಗ ದಲ್ಲಿ ಸಾಗುತ್ತಿದ್ದ ಲಾರಿಯೊಂದು ಮುಂದಿನಿಂದ ಸಾಗುತ್ತಿದ್ದ ಟ್ರಾಕ್ಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಟ್ರಾಕ್ಟರ್‌ನಲ್ಲಿದ್ದ ಎರಡು ವರ್ಷದ ಮಗು, ಮೂವರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ ಜಿಲ್ಲೆಯ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಮಹಾರಾಷ್ಟ್ರ ಮೂಲದ ಬೀಡ ಗ್ರಾಮದ ಮುಸ್ತಕೀನ್ ಬೇಗ್ (30), ಮುಮ್ತಾಝ್ ಬೇಗ್ (35), ಮಹರೂನ್ ಬೇಗ್ (41), ವಿಮಲ್ ಡಂಬಳೆ(65), ಬೀಡಜ್ ಡಂಬಳ (40) ಹಾಗೂ ಬಾಲಕಿ ಆರೋಹಿ ದಾಲೆ(2)ಎಂದು ಗುರುತಿಸಲಾಗಿದೆ.

ಇಲ್ಲಿನ ವಿಜಯಪುರದ ನಂದಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲೆಂದು ಮಹಾರಾಷ್ಟ್ರದ ಬೀಡ ಗ್ರಾಮದಿಂದ ಆಗಮಿಸಿದ್ದ ಕೂಲಿ ಕಾರ್ಮಿಕರು ಮಧ್ಯರಾತ್ರಿ ಟ್ರಾಕ್ಟರ್‌ನಲ್ಲಿ ತೆರಳುತ್ತಿದ್ದ ವೇಳೆ ಹೊರ್ತಿ ಪೊಲೀಸ್ ಠಾಣೆ ಸಮೀಪ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಘಟನೆಯಲ್ಲಿ ಇನ್ನೂ ಹದಿನೈದಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ವಿಜಯಪುರ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ: ಮೃತ ವ್ಯಕ್ತಿಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಘಟನೆ ಕುರಿತು ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಕುಟುಂಬ ವರ್ಗದವರ ಆಕ್ರಂದನ ಹೃದಯ ವಿದ್ರಾವಕವಾಗಿತ್ತು. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರ ಗುಂಪು ಚದುರಿಸಿ, ರಕ್ಷಣಾ ಕಾರ್ಯ ನಡೆಸಿದರು. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನಾ ಸ್ಥಳಕ್ಕೆ ವಿಜಯಪುರ ಹೆಚ್ಚುವರಿ ಎಸ್ಪಿ ಎನ್.ಎಸ್.ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣವಾದ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News