×
Ad

ಐಟಿಡಿಪಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ

Update: 2016-03-28 22:02 IST

ಮಡಿಕೇರಿ, ಮಾ.28: ಬುಡಕಟ್ಟು ಜನರ ಕಡೆಗಣನೆಯನ್ನು ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದ ಐಟಿಡಿಪಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆಯನ್ನು ಆರಂಭಿಸಿವೆ.

ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಬುಡಕಟ್ಟು ಮಹಿಳಾ ಸಂಘಟನೆ ಹಾಗೂ ಬುಡಕಟ್ಟು ಕೃಷಿಕರ ಸಂಘ ಮಾಡು ಅಥವಾ ಮಡಿ ಸಂಕಲ್ಪದೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಹೊರಗಿನಿಂದ ವಲಸೆ ಬಂದವರಿಗೆ ಭೂಮಿಯ ಹಕ್ಕನ್ನು ನೀಡಲಾಗುತ್ತಿದ್ದು, ಕೊಡಗಿನ ಮೂಲ ನಿವಾಸಿಗಳಾದ ಬುಡಕಟ್ಟು ಜನರಿಗೆ ಭೂಮಿಯ ಹಕ್ಕನ್ನು ಯಾಕೆ ನೀಡುತ್ತಿಲ್ಲವೆಂದು ಪ್ರಮುಖರು ಪ್ರಶ್ನಿಸಿದರು.

ಒಕ್ಕ್ಕೂಟದ ಸಂಚಾಲಕ ತಮ್ಮಯ್ಯ ಮಾತನಾಡಿ, ಆದಿವಾಸಿಗಳ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ಆಶ್ರಮ ಶಾಲೆಗಳನ್ನು ನಿರ್ಮಿಸಿವೆಯಾದರೂ ಮೂಲ ಸೌಕರ್ಯಗಳಿಲ್ಲದೆ ನಲುಗುತ್ತಿವೆ. ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇಲ್ಲದೆ ಮಕ್ಕಳು ಕೂಲಿಯಾಳುಗಳಾಗಿ ಪರಿವರ್ತನೆಯಾಗುತ್ತಿದ್ದಾರೆ. ಯುವತಿಯರು ಮತ್ತು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದು, ಗರ್ಭಿಣಿಯರು ಹಾಗೂ ಬಾಣಂತಿಯರು ಸಾವಿಗೀಡಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಂದಲೂ ಮಕ್ಕಳು ಅಸುನೀಗುತ್ತಿದ್ದು, ಗಿರಿಜನರ ಜನಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಇಂದಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, 2006ರಲ್ಲಿ ಜಾರಿಗೆ ಬಂದ ಅರಣ್ಯ ಹಕ್ಕು ಕಾಯ್ದೆ ಇಲ್ಲಿಯವರೆಗೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕಾಡು ಹಾಗೂ ಕಾಡು ಪ್ರಾಣಿಗಳನ್ನು ನೆಚ್ಚಿಕೊಂಡು ಬದುಕುತ್ತಿರುವ ಗಿರಿಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಮ್ಮಯ್ಯ ಆರೋಪಿಸಿದರು.

ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೇಮಾ ಮಾತನಾಡಿ, ಗಿರಿಜನರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಖುದ್ದು ನ್ಯಾಯಾಲಯ ಆದೇಶಿಸಿದ್ದರು ಸರಕಾರ ಇದನ್ನು ಕಡೆಗಣಿಸಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಅನೇಕ ವರ್ಷಗಳಿಂದ ಬುಡಕಟ್ಟು ಜನರು ವಾಸಿಸುತ್ತಿರುವ ಪ್ರದೇಶವನ್ನು ಇತ್ತೀಚೆಗೆ ದೇವರಕಾಡು ಎಂದು ಹೇಳಿಕೊಂಡು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಮೊದಲು ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜನರಲ್ ತಿಮ್ಮಯ್ಯ ವೃತ್ತದಿಂದ ಐಟಿಡಿಪಿ ಕಚೇರಿವರೆಗೆ ಪ್ರತಿಭಟನಕಾರರು ಮೆರವಣಿಗೆ ನಡೆಸಿದರು.

ಒಕ್ಕೂಟದ ಪ್ರಮುಖ ಶೈಲೇಂದ್ರ, ಮಹಿಳಾ ಸಂಘಟನೆಗಳ ಸಂಚಾಲಕಿ ಇಂದಿರಾ, ಪ್ರಮುಖರಾದ ಎ.ಕೆ.ರಾಮು. ಸೋಮಯ್ಯ, ತಿಮ್ಮ, ಪ್ರೇಮಾ, ವೈ.ಪಿ.ಗಪ್ಪು, ರವಿ, ಮಾದೇವಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News