×
Ad

ಪ್ರತ್ಯೇಕ ಘಟನೆ: ಇಬ್ಬರು ನೇಣಿಗೆ ಶರಣು

Update: 2016-03-28 22:10 IST

ಶಿವಮೊಗ್ಗ, ಮಾ. 28: ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶೀಪುರ ಏರಿಯಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ, ಆಟೊ ಹಾಗೂ ಕಾರು ಚಾಲಕ ತಾವು ತಂಗಿದ್ದ ಬಾಡಿಗೆ ಮನೆಗಳಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಆಟೊ ಚಾಲಕ:

ಕಾಶೀಪುರದ ರೇಣುಕಮ್ಮ ಬಡಾವಣೆಯಲ್ಲಿ ಆಟೊ ಚಾಲಕನೋರ್ವ ಬಾಡಿಗೆಗಿದ್ದ ಕೊಠಡಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅನಿಲ್‌ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ಇವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಮನೆ ತೊರೆದಿದ್ದ ಅನಿಲ್‌ಕುಮಾರ್ ಬಾಡಿಗೆ ರೂಮ್‌ವೊಂದರಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಕುಟುಂಬದವರು ಈತನನ್ನು ಮಾತನಾಡಿಸಲು ಸೋಮವಾರ ಆಗಮಿಸಿದ ವೇಳೆ, ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಕಾರು ಚಾಲಕ:

ಮತ್ತೊಂದು ಪ್ರಕರಣದಲ್ಲಿ ಟಾಟಾ ಇಂಡಿಕಾ ಕಾರು ಚಾಲಕ ಹನುಮಂತ (42) ಎಂಬುವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಶೀಪುರ ಮುಖ್ಯ ರಸ್ತೆಯಲ್ಲಿ ನ ಬಾಡಿಗೆಗಿದ್ದ ಮನೆಯಲ್ಲಿಯೇ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರ ಬೆಳಗ್ಗೆ ಸುಮಾರು 10 ರಿಂದ 11 ಗಂಟೆಯೊಳಗೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳಗಳಿಗೆ ಸಬ್ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆಗಳಿಗೆ ಸಂಬಂಧಿಸಿದಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಕಲಂನಡಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News