ನೀರು, ವಿದ್ಯುತ್ ಅಭಾವದಿಂದ ಯುದ್ಧ ನಡೆದರೂ ಆಶ್ಚರ್ಯವೇನಿಲ್ಲ: ಕಿಮ್ಮನೆ
ತೀರ್ಥಹಳ್ಳಿ,ಮಾ.28: ವಿದ್ಯುತ್ ಉಳಿತಾಯದ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಮಿತ ವಿದ್ಯುತ್ ಬಳಕೆಯಿಂದ ಉಳಿತಾಯ ಮನೋಭಾವನೆಯನ್ನು ನಾವುಗಳು ಬೆಳೆಸಿಕೊಂಡಾಗ ಅದು ಇತರರಿಗೆ ತಿಳಿಯುವಂತಾಗಬೇಕು. ನಾಗರಿಕ ಸೌಲಭ್ಯ ಸದ್ಬಳಕೆಯ ವಿಚಾರದಲ್ಲಿ ಜಾಗೃತಿ ಅತ್ಯವಶ್ಯಕ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಪಟ್ಟಣದ ಸೊಪ್ಪುಗುಡ್ಡೆಯ ಮೆಸ್ಕಾಂ ಕಚೇರಿಯಲ್ಲಿ ನಡೆದ ಇಲಾಖೆಯ ಹೊಂಬೆಳಕು ಯೋಜನೆಯಡಿ ವಿವಿಧ ಲಾನುಭವಿಗಳಿಗೆ ಎಲ್‌ಇಡಿ ಬಲ್ಬ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕ ಬದುಕಿನ ಒತ್ತಡಗಳ ನಡುವೆಯೂ ಮುಂದೊಂದು ದಿನ ನೀರು, ವಿದ್ಯುತ್ ಅಭಾವದಿಂದ ಯುದ್ಧ ನಡೆದರೂ ಆಶ್ಚರ್ಯವೇನಿಲ್ಲ. ಪ್ರಸ್ತುತದ ದಿನಗಳಲ್ಲಿ ವಿದ್ಯುತ್ ಅಭಾವ ಮಲೆನಾಡಿನಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಕಾಡುತ್ತಿದೆ. ಹೆಚ್ಚು ಮಳೆ ಬೀಳುವ ಮಲೆನಾಡು ಇಡೀ ರಾಜ್ಯಕ್ಕೇ ಬೆಳಕು ನೀಡಬೇಕಾದ ಸ್ಥಳವಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಸದ್ಬಳಕೆ ವಿಚಾರ ಬಂದಾಗ ಮಿತ ಬಳಕೆಯ ಬಗ್ಗೆ ನಾವು ಚಿಂತಿಸಬೇಕಾಗುತ್ತದೆ ಎಂದರು.
ಈ ಸಮಾರಂಭದಲ್ಲಿ ಜಿಪಂ. ಸದಸ್ಯೆ ಕಲ್ಪನಾ ಪದ್ಮನಾಭ್, ಭಾರತಿ ಪ್ರಭಾಕರ್, ಮೆಸ್ಕಾಂನ ಎಇಇ ರಾಮಮೂರ್ತಿ, ಜೆ.ಇ. ಅಶೋಕ್‌ಭಟ್ ಮತ್ತಿತರರು ಉಪಸ್ಥಿತರಿದ್ದರು.