ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಇಚ್ಛಾಶಕ್ತಿ ಅಗತ್ಯ: ಸ್ಪೀಕರ್ ಕಾಗೋಡು ತಿಮ್ಮಪ್ಪ
ಬೆಂಗಳೂರು, ಮಾ. 28: ಸಾಮಾನ್ಯ ಜನರಿಗೆ ಮೊಟ್ಟ ಮೊದಲ ಬಾರಿಗೆ ದುಡಿಯುವ ಹಕ್ಕು ನೀಡಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಸರಕಾರಕ್ಕೆ ಇಚ್ಛಾಶಕ್ತಿ ಅಗತ್ಯ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಎಂ.ಟಿ.ಕೃಷ್ಣಪ್ಪ ಮಾತನಾಡುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಅವರು, ಖಾತರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಗಳಿಗೆ ವಾರಕ್ಕೊಮ್ಮೆ ಕೂಲಿ ಪಾವತಿಸಬೇಕೆಂದು ಕಾಯ್ದೆಯಿದ್ದು ಅದನ್ನು ಜಾರಿಗೊಳಿಸಬೇಕು.
ಒಂದು ವೇಳೆ ಹದಿನೈದು ದಿನಗಳಿಗೂ ಹೆಚ್ಚು ಕಾಲ ಕೂಲಿ ಪಾವತಿಸದಿದ್ದರೆ, ಪ್ರಾಸಿಕ್ಯೂಷನ್‌ಗೆ ಅವಕಾಶವಿದ್ದು, ಕೂಲಿಕಾರರಿಂದ ದೂರು ದಾಖಲಿಸಿ ಎಂದು ಸಲಹೆ ಮಾಡಿದ ಕಾಗೋಡು ತಿಮ್ಮಪ್ಪ, ಕೇಂದ್ರದಿಂದ ಹಣ ಬಿಡುಗಡೆ ವಿಳಂಬವಾದರೆ ರಾಜ್ಯ ಸರಕಾರವೇ ಕೂಲಿಕಾರರಿಗೆ ಹಣ ಪಾವತಿಸಿ, ಬಳಿಕ ಕೇಂದ್ರದಿಂದ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ವಾರ್ಷಿಕ 70ರಿಂದ 80 ಲಕ್ಷ ರೂ.ವರೆಗೂ ಉದ್ಯೋಗ ಖಾತರಿ ಯೋಜನೆಯಡಿ ಖರ್ಚು ಮಾಡಲು ಅವಕಾಶವಿದ್ದು, ಐದು ವರ್ಷಗಳಲ್ಲಿ ನಮ್ಮ ಕ್ಷೇತ್ರಗಳ ವ್ಯಾಪ್ತಿ ಗ್ರಾಮ ಪಂಚಾಯತ್‌ಗಳನ್ನು ಬಂಗಾರವನ್ನಾಗಿ ಅಭಿವೃದ್ಧಿಪಡಿಸಬಹುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ನುಡಿದರು.
ಆರಂಭಕ್ಕೆ ಮಾತನಾಡಿದ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ, ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ರಾಜ್ಯದ ಕೂಲಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ನೆರೆ ರಾಜ್ಯಗಳಿಗೆ ಹೋಗುತ್ತಿದ್ದು, ಅವಘಡಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಗಮನ ಸೆಳೆದರು.
ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ನ ಕೃಷ್ಣಾರೆಡ್ಡಿ, ಖಾತರಿ ಯೋಜನೆಯಡಿ 2009- 10ರಲ್ಲಿನ ಕೂಲಿ ಮೊತ್ತವನ್ನು ಇನ್ನೂ ಪಾವತಿಸಿಲ್ಲ. ಹೀಗಾದರೆ ಜನ ಸಾಮಾನ್ಯರು ಏನು ಮಾಡಬೇಕು. ಈ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಮಗ್ರ ಅನುಷ್ಠಾನದ ದೃಷ್ಟಿಯಿಂದ ಮಾ.31ಕ್ಕೆ ಈ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು.’
-ಕಾಗೋಡು ತಿಮ್ಮಪ್ಪ, ವಿಧಾನಸಭಾ ಸ್ಪೀಕರ್.