‘ನ್ಯಾಯಾಂಗ ತನಿಖೆಯ ಅಗತ್ಯವಿಲ್ಲ’
ಬೆಂಗಳೂರು, ಮಾ.28: ಮೈಸೂರಿನ ಕ್ಯಾತಮಾರನಹಳ್ಳಿಯ ಆರೆಸೆಸ್ಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ನ್ಯಾಯಾಂಗ ತನಿಖೆಯ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಮಂಡಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಸಿಸಿಬಿ ಪೊಲೀಸರು ಈ ಹತ್ಯೆ ಪ್ರಕರಣದ ಕುರಿತು ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದ್ದು, ತನಿಖೆ ಪ್ರಗತಿಯಲ್ಲಿದೆ. ಕೊಲೆ ಮಾಡಿದವರನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.
ಕಾನೂನು ಉಲ್ಲಂಘನೆ ಮಾಡುವಂತಹ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೆ ಇಲ್ಲ. ತಪ್ಪಿತಸ್ಥರನ್ನು ಬಂಧಿಸಲಾಗುವುದು. ನಿಯಮಾವಳಿಗಳಲ್ಲಿ ಅವಕಾಶವಿಲ್ಲದಿದ್ದರೂ ಮಾನವೀಯ ನೆಲೆಗಟ್ಟಿನಲ್ಲಿ ರಾಜು ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಲಾಗಿದ್ದು, ಇನ್ನು ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ರಾಜು ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಕಲ್ಪಿಸಿಕೊಡುವ ಸಂಬಂಧ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕ್ಯಾತಮಾರನಹಳ್ಳಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೆ ರೀತಿಯ ಭಯದ ವಾತಾವರಣವಿಲ್ಲ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಈ ಪ್ರಕರಣದ ಪತ್ತೆಗೆ ಒಬ್ಬ ಡಿಸಿಪಿ, ಮೂವರು ಎಸಿಪಿಗಳು, ಐದು ಮಂದಿ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಕೃತ್ಯದ ಬಗ್ಗೆ ಮಾಹಿತಿ ಕಲೆಹಾಕಲು ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಸಿಬ್ಬಂದಿಗಳನ್ನು ಕಳುಹಿಸಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದರು.
ಬೇರೆ ಜಿಲ್ಲೆಗಳಲ್ಲಿ ಇದೇ ರೀತಿಯ ಕೃತ್ಯಗಳು ಜರುಗಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಈ ರೀತಿ ಕೃತ್ಯಕ್ಕೆ ಸಂಬಂಧಪಟ್ಟಂತೆ ಮಂಗಳೂರು ಮತ್ತು ಬೆಂಗಳೂರು ಸಿಸಿಬಿ ಘಟಕದವರೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಕಲೆಹಾಕಿ ವಿಚಾರ ವಿನಿಯಮ ಮಾಡಿಕೊಳ್ಳಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪ್ರತ್ಯಕ್ಷದರ್ಶಿಗಳು, ಸಾಕ್ಷಿಗಳು, ರೌಡಿಗಳು, ಮತೀಯ ಗೂಂಡಾಗಳು ಹಾಗೂ ಗುಮಾನಿ ಆಸಾಮಿಗಳು ಸೇರಿದಂತೆ ಒಟ್ಟು 64 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, 20ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿ ಕಲೆ ಹಾಕಲಾಗಿದೆ ಎಂದು ಅವರು ಹೇಳಿದರು.
ಸಿ.ಟಿ.ರವಿಯನ್ನು ಪರೋಕ್ಷವಾಗಿ ತಿವಿದ ಸ್ಪೀಕರ್
ಮೈಸೂರಿನ ಆರೆಸ್ಸೆಸ್ ಕಾರ್ಯಕರ್ತ ರಾಜು ಕೊಲೆ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸಿ.ಟಿ.ರವಿಯನ್ನು ಪರೋಕ್ಷವಾಗಿ ತಿವಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಇತ್ತೀಚೆಗೆ ಹೆಣ್ಣು ಮಗಳೊಬ್ಬಳ ಹತ್ಯೆಯಾಗಿದೆ. ಅದನ್ನು ಈ ವಿಷಯದ ಜೊತೆ ಸೇರಿಸಿ ಪ್ರಸ್ತಾಪ ಮಾಡಿ ಎಂದರು.
ಸ್ಪೀಕರ್ ಹೇಳಿಕೆಯಿಂದ ಕ್ಷಣಕಾಲ ಸಿ.ಟಿ.ರವಿಗೆ ಏನು ಮಾಡಬೇಕು ಎಂಬುದೇ ತೋಚಲಿಲ್ಲ.