ಸಚಿವರಿಗೆ ಸ್ಪಂದನೆಯ ‘ಬರ’ ಆವರಿಸಿದೆ: ಕೃಷ್ಣಪ್ಪ ಲೇವಡಿ
ಬೆಂಗಳೂರು, ಮಾ. 28: ಎಸ್ಸಿ-ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನದ ಪೈಕಿ ಶೇ.50ರಷ್ಟು ವೆಚ್ಚವಾಗಿಲ್ಲ. ಅಲ್ಪಸಂಖ್ಯಾತರ ಮಸೀದಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದ ಜೆಡಿಎಸ್ ಸದಸ್ಯ ಎಂ.ಟಿ.ಕೃಷ್ಣಪ್ಪ, ರಾಜ್ಯಕ್ಕೆ ಭೀಕರ ಬರ ಆವರಿಸಿದ್ದರೆ ಸಚಿವರಿಗೆ ‘ಸ್ಪಂದಿಸುವ ಬರ’ ಆವರಿಸಿದೆ ಎಂದು ಲೇವಡಿ ಮಾಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಅನುಭವವನ್ನು ಬಳಸಿಕೊಂಡಿಲ್ಲ. ಇದೊಂದು ದೂರದೃಷ್ಟಿ ಇಲ್ಲದ ಬಜೆಟ್ ಎಂದು ಟೀಕಿಸಿದರು.
ಪ್ರಸಕ್ತ ಆಯವ್ಯಯದಲ್ಲಿ ಯಾವುದೇ ಹೊಸ ಭಾಗ್ಯಗಳಿಲ್ಲ. 2018ಕ್ಕೆ ವಿಧಾನಸಭೆ ಚುನಾವಣೆ ಬರಲಿದ್ದು, ಆಗ ಭಾಗ್ಯಗಳನ್ನು ಪ್ರಕಟಿಸಲಾಗುತ್ತದೆ ಎಂದು ಟೀಕಿಸಿದ ಅವರು, ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 12 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಮಳೆಯಿಂದ ಹಾನಿಗೀಡಾಗಿರುವ ದ್ರಾಕ್ಷಿ, ದಾಳಿಂಬೆ, ಮಾವು, ಬಾಳೆ ಸೇರಿದಂತೆ ಮತ್ತಿತರ ಬೆಳೆಗಾರರಿಗೆ ಪರಿಹಾರ ನೀಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು-ಮೂರು ಪಶು ಆಸ್ಪತ್ರೆಗಳನ್ನು ತೆರೆಯಬೇಕು. ಪ್ರಸಕ್ತ ಸಾಲಿನ ಶಾಸಕರ ಪ್ರದೇಶಾಭಿವದ್ಧಿ ನಿಧಿಯನ್ನು 5 ಕೋಟಿ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ವಿರೋಧ ಪಕ್ಷವಿದ್ದಾಗ ಹೋರಾಟ ಮಾಡುತ್ತಿದ್ದವರಿಗೆ ಆಡಳಿತ ಸಿಕ್ಕ ಕೂಡಲೇ ಕಣ್ಣಿಗೆ ಪೊರೆ ಬರುತ್ತದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತವಾಗಿವೆ ಎಂದ ದೂರಿದ ಕೃಷ್ಣಪ್ಪ, ಆಯವ್ಯಯದಲ್ಲಿ ಮೀಸಲಿಟ್ಟ ಅನುದಾನ ಬಳಕೆ ಮಾಡಲು ಆಗದಿದ್ದರೆ ಯಾವ ಪುರುಷಾರ್ಥಕ್ಕೆ ಸಾಲ ಮಾಡಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.