ಬೆಂಗಳೂರಿನಲ್ಲಿ ರಸ್ತೆ ಅಪಘಾತ
ವೀರಾಜಪೇಟೆ, ಮಾ. 28: ಇಂದು ಬೆಳಗ್ಗಿನ ಜಾವ ಬೆಂಗಳೂರು-ಮೈಸೂರು ನೈಸ್ ರಸ್ತೆಯ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಭ ವಿಸಿದ ರಸ್ತೆ ಅಪಘಾತವೊಂದರಲ್ಲಿ ವೀರಾಜಪೇಟೆಗೆ ಸಮೀಪದ ನರಿಯಂದಡ(ಎಡಪಾಲ)ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಅಬ್ದುಲ್ ಶುಕೂರ್ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ದುಬೈನಲ್ಲಿ ಉದ್ಯೋಗದಲ್ಲಿರುವ ಶುಕೂರ್ ಕೆಲಸದ ನಿಮಿತ್ತ ಚೀನಾ ದೇಶಕ್ಕೆ ಹೋಗಿದ್ದರು. ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಬೆಂಗಳೂರು ಮಾರ್ಗವಾಗಿ ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಬರೆಗೆ ಬಡಿದಿದೆ. ಕಾರಿನ ಚಾಲಕನಿಗೆ ತೀವ್ರ ಗಾಯಗಳಾಗಿವೆ. ಈ ಯುವಕ ಇಂದು ನಡೆಯಬೇಕಿದ್ದ ತನ್ನ ಸಹೋದರಿಯ ಮದುವೆ ಸಮಾರಂಭಕ್ಕೆ ಆಗಮಿಸಬೇಕಿತ್ತು. ಮೃತರು ಎಡಪಾಲದ ಶಾದುಲಿ, ತಾಯಿ ಆಯಿಶಾ ದಂಪತಿಯ ಏಕೈಕ ಪುತ್ರ.
ಮೃತದೇಹದ ಮರಣೋತ್ತರ ಪರೀಕ್ಷೆ ಬೆಂಗಳೂರಿನಲ್ಲಿ ಮುಗಿಸಿದ ನಂತರ ಊರಿಗೆ ತರಲಾಗಿ ಇಂದು ರಾತ್ರಿ ಅಂತ್ಯಕ್ರಿಯೆ ನಡೆಯಿತು. ಈ ಸಂಬಂಧ ಬೆಂಗಳೂರು ಇಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.