ಸಿಐಡಿ ಭವನದ ಜಾಗದಲ್ಲೆ ಶಾಸಕರ ಕ್ಲಬ್ ನಿರ್ಮಾಣ?
ಬೆಂಗಳೂರು, ಮಾ. 28: ನಗರದ ಅರಮನೆ ರಸ್ತೆಯಲ್ಲಿ ಸಿಐಡಿ ಭವನದ ಜಾಗದಲ್ಲೇ ಶಾಸಕರ ಕ್ಲಬ್ ನಿರ್ಮಾಣಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ನೇತೃತ್ವದ ಸಮಿತಿ ಸಮ್ಮತಿ ಸೂಚಿಸಿದೆ. ಆದರೆ, ಈ ಸಂಬಂಧ ರಾಜ್ಯ ಸರಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಶಾಸಕರ ಕ್ಲಬ್ ನಿರ್ಮಾಣ ಸಂಬಂಧ ಸ್ಪೀಕರ್ ನೇತೃತ್ವದ ಸಮಿತಿ ಅರಮನೆ ರಸ್ತೆಯಲ್ಲಿನ ಸಿಐಡಿ ಕೇಂದ್ರದ ಜಾಗದಲ್ಲಿ ಆಗಬೇಕೆಂಬ ಅಭಿಪ್ರಾಯಕ್ಕೆ ಬಂದಿದೆ. ಗೃಹ ಇಲಾಖೆ ಅಧಿಕಾರಿಗಳು ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರದ ಹಿಂಭಾಗದ ಜಾಗದಲ್ಲಿ ಕ್ಲಬ್ ನಿರ್ಮಾಣ ಮಾಡಲು ಜಾಗ ನೀಡಲಾಗುವುದು ಎಂದು ಹೇಳಿದೆ.
ಸೋಮವಾರ ಸ್ಥಳ ಪರಿಶೀಲನೆ ನಡೆಸಿದ ಸ್ಪೀಕರ್ ನೇತೃತ್ವದ ಸಮಿತಿ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರದ ಹಿಂಭಾಗದ ಸ್ಥಳವನ್ನು ತಿರಸ್ಕರಿಸಿದ್ದು, ಅರಮನೆ ರಸ್ತೆಯಲ್ಲಿನ ಸಿಐಡಿ ಕೇಂದ್ರದಲ್ಲೆ ಶಾಸಕರ ಕ್ಲಬ್‌ಗೆ ಸೂಕ್ತ ಸ್ಥಳ ಎಂಬ ಅಭಿಪ್ರಾಯಕ್ಕೆ ಸಮಿತಿ ಬಂದಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಪ್ರಸ್ತುತ ಅರಮನೆ ರಸ್ತೆಯಲ್ಲಿನ ಸಿಐಡಿ ಕೇಂದ್ರ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಸ್ಥಳಾಂತರವಾಗಲಿದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನಕ್ಕೆ ಸಮೀಪದಲ್ಲೇ ಇರುವ ಸಿಐಡಿ ಕೇಂದ್ರದಲ್ಲೇ ಶಾಸಕರ ಕ್ಲಬ್‌ಗೆ ಸೂಕ್ತ ಸ್ಥಳ ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆಂದು ಗೊತ್ತಾಗಿದೆ.