ಜಿಲ್ಲೆಯಲ್ಲಿ ಒಟ್ಟು 12 ಸ್ಮಾರಕಗಳ ದುರಸ್ತಿಗೆ 5.22 ಕೋಟಿ ರೂ. ಬಳಕೆ
ಚಿಕ್ಕಮಗಳೂರು, ಮಾ.28: ಜಿಲ್ಲೆಯಲ್ಲಿ ಒಟ್ಟು 12 ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿ ಅವುಗಳ ದುರಸ್ತಿಗೆ 5.22 ಕೋಟಿ ರೂ. ಅನುದಾನ ಬಳಕೆ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ತಾವು ಸದನದಲ್ಲಿ ಮಾ. 21ರಂದು ಸ್ಮಾರಕಗಳ ಕುರಿತು ಕೇಳಿದ ಪ್ರಶ್ನೆಗೆ ಸರಕಾರ ಈ ರೀತಿ ಉತ್ತರ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟು 12 ಸ್ಮಾರಕಗಳಲ್ಲಿ 8ದೇವಾಲಯಗಳ ಸಂರಕ್ಷಣೆಯನ್ನು 13ನೆಯ ಹಣಕಾಸು ಯೋಜನೆಯಡಿ ಕೈಗೊಳ್ಳಲಾಗಿದೆ. ಮುಖ್ಯವಾಗಿ ಹೊಯ್ಸಳರ ಮೂಲ ಸ್ಥಾನವಾದ ಮೂಡಿಗೆರೆ ತಾಲೂಕಿನ ಅಂಗಡಿಯ ಚನ್ನಕೇಶವ ದೇವಾಲಯದ ಸಂರಕ್ಷಣಾ ಕಾರ್ಯವನ್ನು 2010-11ರಲ್ಲಿ ಪೂರ್ಣಗೊಳಿಸಲಾಗಿದೆ. ಇದಕ್ಕೆ 87.14 ಲಕ್ಷ ರೂ. ವೆಚ್ಚವಾಗಿದೆ. ಈ ದೇವಾಲಯದ ರಕ್ಷಣೆಗೆ ಕಳೆದ 3 ವರ್ಷಗಳಲ್ಲಿ ಯಾವ ಅನುದಾನವನ್ನು ಬಿಡುಗಡೆಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ನೌಕರರ ಬೇಡಿಕೆಗಳ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿ, ಈ ವ್ಯವಸ್ಥೆಯನ್ನು ಜಿವಿಕೆ-ಇಎಂಆರ್‌ಐ ಸಂಸ್ಥೆ ನಿರ್ವಹಿಸುತ್ತಿದ್ದು, ಒಟ್ಟು 1,566 ವಾಹನ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ನೇ ಮಕಾತಿ ಹಾಗೂ ಬೇಡಿಕೆಯನ್ನು ಆ ಸಂಸ್ಥೆ ನಿರ್ವಹಿಸಬೇಕಾಗಿದ್ದು, ಪ್ರಸ್ತುತ ಹಂತದಲ್ಲಿ ನಿರ್ವಹಣಾ ಸಂಸ್ಥೆಯನ್ನು ಬದಲಾಯಿಸುವ ಬಗ್ಗೆ ಸರಕಾರ ಚಿಂತಿಸಿಲ್ಲ ಹಾಗೂ ಸರಕಾರವೇ ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗಲು ಉದ್ದೇಶಿಸಿಲ್ಲ ಎಂದು ಆರೋಗ್ಯ ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ ಎಂದರು. ಸ್ವಚ್ಛ ಭಾರತ ಮಿಷನ್ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಗರ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಿಗೆ 36.53 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದು, ಚಿಕ್ಕಮಗಳೂರು ನಗರಸಭೆಗೆ 14.72 ಲಕ್ಷ ರೂ., ಕಡೂರು ಪುರಸಭೆಗೆ 7.30 ಲಕ್ಷ ರೂ., ಬೀರೂರು ಪುರಸಭೆಗೆ 4.60 ಲಕ್ಷ ರೂ., ತರೀಕೆರೆ ಪುರಸಭೆಗೆ 6.25 ಲಕ್ಷ ರೂ., ನರಸಿಂಹರಾಜಪುರ ಪಟ್ಟಣ ಪಂಚಾಯತ್‌ಗೆ 2.38 ಲಕ್ಷ ರೂ. ಮತ್ತು ಕೊಪ್ಪ ಪಟ್ಟಣ ಪಂಚಾಯತ್‌ಗೆ 41 ಸಾವಿರ ರೂ., ಶೃಂಗೇರಿ ಪಟ್ಟಣಪಂಚಾಯತ್‌ಗೆ 42 ಸಾವಿರ ರೂ. ಮತ್ತು ಮೂಡಿಗೆರೆ ಪಟ್ಟಣ ಪಂಚಾಯತ್‌ಗೆ 45 ಸಾವಿರ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.