ಎಸಿಬಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಸಿಎಂ
ಬೆಂಗಳೂರು, ಮಾ.28: ‘ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ರಚನೆ ಮಾಡಿ ರಾಜ್ಯ ಸರಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಅದನ್ನು ಮತ್ತೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಸೋಮವಾರ ವಿಧಾನಸಭೆ ಅಧಿಕೃತ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸಿಬಿ ರಚನೆ ಮಾ.31ರ ವರೆಗೆ ಯಥಾಸ್ಥಿತಿ ಕಾಪಾಡಿ, ಇಲ್ಲವಾದರೆ ಜನತೆಯ ಶಾಪ ತಟ್ಟುತ್ತದೆ. ಬಿಜೆಪಿ ಎಸಿಬಿ ರಚನೆ ಆದೇಶ ಹಿಂಪಡೆಯಲು ಆಗ್ರಹಿಸಿ ಹೋರಾಟ ಮಾಡುತ್ತಿದೆ ಎಂದರು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನತೆಯ ಶಾಪ ನಿಮಗೆ(ಬಿಜೆಪಿ) ತಟ್ಟಬೇಕಷ್ಟೇ. ಅಂತಹ ವಿಚಾರಗಳಲ್ಲಿ ರಾಜ್ಯ ಸರಕಾರಕ್ಕೆ ನಂಬಿಕೆ ಇಲ್ಲ. ಲೋಕಪಾಲ್ ಕಾಯ್ದೆ ವ್ಯಾಪ್ತಿಗೆ ಸಿಬಿಐಯನ್ನು ತರಲು ಕೇಂದ್ರ ಸರಕಾರಕ್ಕೆ ಸಲಹೆ ಮಾಡಿ ಎಂದು ತಿರುಗೇಟು ನೀಡಿದರು. ಬಿಜೆಪಿಯ ಚಳವಳಿಗಳನ್ನು ತಾನು ಬಹಳ ನೋಡಿದ್ದೇನೆ. ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದ ಸಿದ್ದರಾಮಯ್ಯ, ‘ಎಸಿಬಿ’ ರಚನೆಗೆ ನಾಂದಿ ಹಾಡಿದ್ದು ಬಿಜೆಪಿ. ಮಹಾರಾಷ್ಟ್ರ, ಗುಜರಾತ್ ಹಾಗೂ ಹರ್ಯಾಣಗಳಲ್ಲಿ ಇರೋದು ಯಾವ ದಳ ಎಂದು ಪ್ರಶ್ನಿಸಿದರು.
ಆರಂಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಭ್ರಷ್ಟಾಚಾರ ನಿಗ್ರಹ ದಳ ವಾಸ್ತವದಲ್ಲಿ ಭ್ರಷ್ಟರ ರಕ್ಷಣಾ ದಳವಾಗಿದೆ. ರಾಜ್ಯ ಸರಕಾರ ಎಸಿಬಿ ರಚನೆ ಯಾಥಾಸ್ಥಿತಿಯಲ್ಲಿದ್ದು, ಲೋಕಾಯುಕ್ತ ಸಂಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.