×
Ad

ಬೆಂಗಳೂರಿಗೂ ಬಂತು ಕೋಟಿ ರೂ.ಬೆಲೆಯ ಶ್ವಾನ !

Update: 2016-03-28 23:49 IST

ಬೆಂಗಳೂರು, ಮಾ.28: ಪ್ರತಿಷ್ಠಿತ ಕಂಪೆನಿಗಳ ಐಷಾರಾಮಿ ಕಾರುಗಳ ಬೆಲೆಯನ್ನು ನಾಚಿಸುವಂತೆ ಬರೋಬ್ಬರಿ 1ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಶ್ವಾನವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ವಿದೇಶದಿಂದ ತರಿಸಿದ್ದು, ನಗರದ ನಾಗರಿಕರಲ್ಲಿ ಆ ಶ್ವಾನ ಕುತೂಹಲ ಸೃಷ್ಟಿಸಿದೆ.

ಜಗತ್ತಿನಲ್ಲಿ ಅತಿ ವಿರಳ ಶ್ವಾನ ತಳಿಗಳಲ್ಲಿ ‘ಕೊರಿಯನ್ ಮ್ಯಾಸ್ಟಿಫ್ ದೋಸಾ’ ಶ್ವಾನ ಅತ್ಯಂತ ವಿಶೇಷ ಮತ್ತು ವಿಶಿಷ್ಟವೂ ಹೌದು. ಇಂತಹ ಅಪರೂಪದ ಶ್ವಾನವನ್ನು ನಗರದ ಬನಶಂಕರಿಯ ನಿವಾಸಿ ಶ್ವಾನ ಪ್ರಿಯ ರಮೇಶ್ ಒಂದು ಕೋಟಿ ರೂ. ನೀಡಿ ಖರೀದಿಸಿ ನಗರಕ್ಕೆ ತಂದಿದ್ದಾರೆ.

ವಿಶ್ವದ ಮಾಹಿತಿ ತಾಣವೇ ಆಗಿರುವ ಗೂಗಲ್‌ನಲ್ಲಿ ಹುಡುಕಿದರೂ ಈ ಶ್ವಾನದ ಬಗ್ಗೆ ಮಾಹಿತಿ ದೊರೆಯುವುದು ಕಷ್ಟಸಾಧ್ಯ. ನೋಡಲು ಸಿಂಹದಂತೆ ಕಾಣುವ ಈ ಶ್ವಾನ, ಬೊಗಳುವುದಿಲ್ಲ, ಕಚ್ಚುವುದೂ ಇಲ್ಲ ಎಂಬುದು ‘ಕೊರಿಯನ್ ಮ್ಯಾಸ್ಟಿಫ್ ದೋಸಾ’ ಶ್ವಾನದ ವಿಶೇಷವಾಗಿದೆ.

ಇಡೀ ಜಗತ್ತಿನಲ್ಲಿ ಕೇವಲ 500ರಷ್ಟಿರುವ ಈ ‘ಕೊರಿಯನ್ ಮ್ಯಾಸ್ಟಿಫ್ ದೋಸಾ’ ಶ್ವಾನ 75ರಿಂದ 80 ಕೆಜಿ ತೂಕವಿದ್ದು, ಗಂಡು ತಳಿಯ ಶ್ವಾನ 32 ಇಂಚು, ಹೆಣ್ಣು ತಳಿಯ ಶ್ವಾನ 29 ಇಂಚು ಎತ್ತರ ಬೆಳೆಯುತ್ತದೆ. ‘ಕೊರಿಯನ್ ಮ್ಯಾಸ್ಟಿಫ್ ದೋಸಾ’ ಶ್ವಾನವನ್ನು ಸಾಕುವುದು ನಿಜಕ್ಕೂ ಪ್ರತಿಷ್ಠೆಯೇ ಸರಿ.

ಅತ್ಯಂತ ದುಬಾರಿ ಬೆಲೆಯ ಶ್ವಾನ ಎರಡೂ ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದು, ಈ ಶ್ವಾನ ಇದೀಗ ಬೆಂಗಳೂರು ನಗರದ ಜನತೆಗೆ ಆಕರ್ಷಣೆಯಾಗಿದೆ. ಕೋಟಿ ರೂ.ಬೆಲೆ ಬಾಳುವ ಗಂಡು ಮತ್ತು ಹೆಣ್ಣು ಶ್ವಾನಗಳ ಎರಡು ಮರಿಗಳನ್ನು ತಂದಿರುವ ಶ್ವಾನಪ್ರಿಯ ರಮೇಶ್ ಅವುಗಳಿಗೆ ಹೆಸರಿಡುವ ಸಂಭ್ರಮದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News