ಸರಣಿ ಕಳವು ಪ್ರಕರಣ: ಆರೋಪಿಗಳ ಸಹಿತ ಸೊತ್ತು ವಶ
ಚಿಕ್ಕಮಗಳೂರು, ಮಾ.29: ಇತ್ತೀಚೆಗೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸಿ ಕಳವು ಮಾಡಲಾದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಿಪ್ಪುನಗರ ನಿವಾಸಿ ಇಮ್ರಾನ್(31) ಮತ್ತು ತರೀಕೆರೆ ನಿವಾಸಿ ದಸ್ತಗೀರ್(36)ಬಂಧಿತ ಆರೋಪಿಗಳು.
ಟಿಪ್ಪುನಗರದ ನಿವಾಸಿ ಮುಶೀರ್ ಅಹ್ಮದ್‌ರವರ ಮನೆಯಲ್ಲಿ ರಾತ್ರಿ ಯಾರೂ ಇಲ್ಲದ ವೇಳೆಯಲ್ಲಿ ಆರೋಪಿಗಳು ನಕಲಿ ಬೀಗದ ಕೈಯನ್ನು ಬಳಸಿ ಮನೆಯ ಬೀರುವಿನಲ್ಲಿಟ್ಟಿದ್ದ 78 ಸಾವಿರ ರೂ. ನಗದು ಮತ್ತು 170 ಗ್ರಾಂ ಚಿನ್ನವನ್ನು ಕಳವು ಮಾಡಿದ್ದರು. ಅದೇ ರೀತಿ ನಗರದ ವಿವಿಧೆಡೆಗಳಲ್ಲಿ ರಾತ್ರಿ ವೇಳೆ ಪಾರ್ಕ್ ಮಾಡಿದ್ದ ವಾಹನಗಳ 9 ಬ್ಯಾಟರಿಗಳನ್ನು, ಸಂತೆ ಮೈದಾನ ನಿವಾಸಿ ನದೀಂ ಎಂಬವರ ಮನೆ ಮುಂಭಾಗದಲ್ಲಿರಿಸಿದ್ದ ಹಣ್ಣು, ತರಕಾರಿಗಳನ್ನು ಸಂಗ್ರಹಿಸಿಡುವ 63 ಕ್ರೇಟ್‌ಗಳನ್ನು ಕಳವು ಮಾಡಿದ್ದರು. ಅವುಗಳಲ್ಲಿ ವಾಹನಗಳ ಬ್ಯಾಟರಿಗಳನ್ನು ಆಸ್ಪತ್ರೆ ರಸ್ತೆಯ ರಾಘವೇಂದ್ರ ಮೆಟಲ್ಸ್ ಮಾಲಕ ಹರೀಶ್‌ರವರಿಗೆ ಮಾರಾಟ ಮಾಡಿದ್ದರು.
ಆರೋಪಿಗಳನ್ನು ಬಂಧಿಸಿ ಪೊಲೀಸರು ಆರೋಪಿಗಳಿಂದ 170 ಗ್ರಾಂ ಚಿನ್ನಾಭರಣಗಳು, 26 ಸಾವಿರ ರೂ. ನಗದು, 9 ವಾಹನಗಳ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ಟಾಟಾ ಏಸ್ ವಾಹನವನ್ನು ಸಹ ವಶಪಡಿಸಿಕೊಂಡಿದ್ದಾರೆ. ಕ್ರೇಟ್‌ಗಳನ್ನು ಹಾಸನಕ್ಕೆ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದ್ದು ಅವುಗಳನ್ನು ವಶಪಡಿಸಿಕೊಳ್ಳುವುದು ಬಾಕಿ ಇರುತ್ತದೆ. ಆರೋಪಿಗಳನ್ನು ಮತ್ತು ಆರೋಪಿಗಳಿಂದ ಕಳವು ಮಾಡಿದ ಮಾಲನ್ನು ಪಡೆದುಕೊಂಡ ಹರೀಶ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್ಪಿ ಸಂತೋಷ್ ಬಾಬು, ಎಎಸ್ಪಿ ಅಣ್ಣಪ್ಪ ನಾಯ್ಕ, ಡಿಎಸ್ಪಿ ಕಲ್ಲಪ್ಪ ಹಂಡಿಬಾಗ್‌ರವರ ಮಾರ್ಗದರ್ಶನದಲ್ಲಿ ನಗರ ವೃತ್ತದ ಸಿಪಿಐ ಕೃಷ್ಣರಾಜುರವರು ಆರೋಪಿಗಳನ್ನು ಪತ್ತೆಹಚ್ಚಿ ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಗೆ ನಗರ ಠಾಣಾ ಪಿಎಸ್ಸೈಗಳಾದ ಸಲೀಂ ಅಬ್ಬಾಸ್, ನಂಜಪ್ಪ, ಎಎಸ್ಸೈ ವಿಶ್ವನಾಥ್, ಆನಂದೇಗೌಡ, ಸಿಬ್ಬಂದಿಯಾದ ಗಿರೀಶ್, ನವೀನ್, ಜಯಶಂಕರ್, ರವಿ, ಮಧುಸೂಧನ್, ರಾಜಪ್ಪ, ಚಾಲಕ ಪ್ರಕಾಶ್, ಬಸವರಾಜ್ ಸಹಕರಿಸಿರುತ್ತಾರೆ.