ಭ್ರೂಣಲಿಂಗ ಪತ್ತೆ ನಿಷೇಧ ಕಾನೂನು ಅರಿವು ಕಾರ್ಯಾಗಾರ
ಸಾಗರ,ಮಾ.29: ಒಂದು ಕಾಲದಲ್ಲಿ ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಸಂಭ್ರಮಿಸುತ್ತಿದ್ದರು. ಈಗ ಹೆಣ್ಣುಮಗು ಹುಟ್ಟಿದರೆ ಮೂಗು ಮುರಿಯುತ್ತಿದ್ದಾರೆ ಎಂದು ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಎಸ್.ಸುಜಾತ ಹೇಳಿದ್ದಾರೆ.
ಇಲ್ಲಿನ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬದಲಾದ ದಿನಮಾನಗಳಲ್ಲಿ ಹೆಣ್ಣಿನ ಬಗ್ಗೆ ಇರುವ ಗೌರವಾಧಾರಗಳು ಕಡಿಮೆಯಾಗುತ್ತಿವೆೆ. ವಿಜ್ಞಾನ ಬೆಳವಣಿಗೆ ಆದಂತೆಲ್ಲಾ ಭ್ರೂಣದಲ್ಲಿಯೇ ಲಿಂಗಪತ್ತೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಹೆಣ್ಣಾದರೆ ಅದನ್ನು ಭ್ರೂಣದಲ್ಲಿಯೇ ತೆಗೆಸುವ ಗಂಡಾದರೆ ಇರಲಿ ಎನ್ನುವ ಕೆಟ್ಟ ಪ್ರವೃತ್ತಿ ಹೆಚ್ಚುತ್ತಿದೆ. ಅವಿದ್ಯಾವಂತರಿಗಿಂತ ವಿದ್ಯಾವಂತರೆ ಇಂತಹ ಕೆಲಸಕ್ಕೆ ಮುಂದಾಗುತ್ತಿರುವುದು ದುರದೃಷ್ಟಕರ ಎಂದರು. ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಮಾಡುವುದು ಕಾನೂನು ಪ್ರಕಾರ ಅಕ್ಷಮ್ಯ ಅಪರಾಧ. ಇದಕ್ಕೆ ಬೆಂಬಲಿಸುವವರು ಸಹ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರ ಸಂಖ್ಯೆ ಕಡಿಮೆ ಆದರೆ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ಜೊತೆಗೆ ಅಪರಾಧ ಸಂಖ್ಯೆ ಸಹ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಇಂತಹ ಜಾಗೃತ ಶಿಬಿರಗಳ ಮೂಲಕ ಮಹಿಳೆಯರನ್ನು ಹಾಗೂ ಸಮಾಜವನ್ನು ಜಾಗೃತಗೊಳಿಸುವ ಅಗತ್ಯವಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಕುಮಾರಿ ಮಾತನಾಡಿ, ಆಧುನಿಕ ಯುಗದಲ್ಲಿ ನಾವಿದ್ದರೂ ಹೆಣ್ಣಿನ ಮೇಲಿನ ಶೋಷಣೆ ಇನ್ನೂ ಕೊನೆಯಾಗಿಲ್ಲ. ಜಾತಿ, ಲಿಂಗ, ವರ್ಣದ ಹೆಸರಿನಲ್ಲಿ ಹೆಣ್ಣ್ಣನ್ನು ಶೋಷಿಸುವುದು ಹೆಚ್ಚುತ್ತಿದೆ. ಸಮಾಜದ ಆರೋಗ್ಯವನ್ನು ಹದಗೆಡಿಸುತ್ತಿರುವ ಇಂತಹ ದೌರ್ಜನ್ಯದ ವಿರುದ್ಧ್ದ ಮಹಿಳೆ ಧ್ವನಿ ಎತ್ತುವ ಅಗತ್ಯವಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯಾಗಿ ನೋಡುವ ಪರಿಪಾಠ ನಿಲ್ಲಬೇಕು ಎಂದರು. ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಸಹಾಯಕ ಸರಕಾರಿ ಅಭಿಯೋಜಕಿ ಸುನೀತಾ ನಾಗೇಕರ್ ಮತ್ತು ನ್ಯಾಯವಾದಿ ಸಂತೋಷ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಉಪಾಧ್ಯಕ್ಷ ಐ.ಎನ್.ಸುರೇಶಬಾಬು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜಶೇಖರ ಗಾಳಿಪುರ, ಆರ್.ಸಿ.ಮಂಜುನಾಥ್, ತಾಪಂ ಸದಸ್ಯ ಕಲಸೆ ಚಂದ್ರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್.ಶೇಖರರಾವ್ ಉಪಸ್ಥಿತರಿದ್ದರು.