×
Ad

ಮೌಲ್ಯಮಾಪನ ಬಹಿಷ್ಕರಿಸಿದರೆ ಪಿಯು ಉಪನ್ಯಾಸಕರ ವಿರುದ್ಧ ಪ್ರತಿಭಟನೆ

Update: 2016-03-29 22:11 IST

ಶಿವಮೊಗ್ಗ,ಮಾ.29: ಬೇಡಿಕೆ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಘೋಷಿಸಿದೆ. ಮತ್ತೊಂದೆಡೆ ಯುವ ಕಾಂಗ್ರೆಸ್ ಹಾಗೂ ಪೋಷಕರ ವೇದಿಕೆ ಸಂಘಟನೆಯು, ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸಿದರೆ ಉಪನ್ಯಾಸಕರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡದಂತೆ ಎಚ್ಚರಿಕೆ ನೀಡಿದೆ.

ಮಂಗಳವಾರ ಪೋಷಕರ ವೇದಿಕೆಯ ಅಧ್ಯಕ್ಷರೂ ಆದ ಯುವ ಕಾಂಗ್ರೆಸ್ ಮುಖಂಡ ಕೆ.ರಂಗನಾಥ್‌ರವರು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಉಪನ್ಯಾಸಕರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಉಪನ್ಯಾಸಕರು ಇದಕ್ಕೆ ಅವಕಾಶ ಮಾಡಿಕೊಡಬಾರದು. ಬೇಡಿಕೆ ಈಡೇರಿಕೆಗೆ ಬೇರೆ ಮಾರ್ಗದಲ್ಲಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಸರಿಯಲ್ಲ: ಉಪನ್ಯಾಸಕರ ಬೇಡಿಕೆಗೆ ತಮ್ಮ ಸಹಮತವೂ ಇದೆ. ಆದರೆ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗುವಂತೆ ಮಾಡುವುದು ಸರಿಯಾದ ಕ್ರಮವಲ್ಲ. ಉಪನ್ಯಾಸಕರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬಾರದು ಎಂದು ಸಲಹೆ ನೀಡಿದರು. ಉಪನ್ಯಾಸಕ ವೃತ್ತಿಯು ಅತ್ಯಂತ ಪವಿತ್ರವಾದದು. ಅದರ ಗೌರವವನ್ನು ಉಪನ್ಯಾಸಕರು ಕಾಪಾಡಿಕೊಂಡು ಹೋಗಬೇಕು. ಪ್ರತಿಬಾರಿ ಮೌಲ್ಯಮಾಪನ ವೇಳೆ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದು ಸರಿಯಾದ ಕ್ರಮವಲ್ಲ. ಬಹಿಷ್ಕಾರದಿಂದ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಚಿಂತೆಗೊಳಗಾಗುತ್ತಾರೆ. ಹಾಗೆಯೇ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಇದನ್ನು ಉಪನ್ಯಾಸಕರು ಅರಿತುಕೊಳ್ಳಬೇಕಾಗಿದೆ ಎಂದು ಕೆ.ರಂಗನಾಥ್ ತಿಳಿಸಿದರು. ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಕುಮಾರ್, ಆರ್.ಕಿರಣ್, ಪ್ರದೀಪ್‌ಕುಮಾರ್, ಟಿ.ವಿ.ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News