ಮಹಿಳೆ, ಮಕ್ಕಳ ಸುರಕ್ಷತೆಯಾದರೆ ದೇಶ ಅಭಿವೃದ್ಧಿ: ಡಿಸಿ ಅಂಜನ್ ಕುಮಾರ್
ದಾವಣಗೆರೆ, ಮಾ. 29: ದೇಶದಲ್ಲಿ ಮಹಿಳೆ, ಮಕ್ಕಳ ಸುರಕ್ಷತೆಯಾದರೆ ದೇಶವು ಅಭಿವೃದ್ಧಿ ಕಾಣಲು ಸಾಧ್ಯ. ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವನ್ನು ತಡೆಗಟ್ಟಿದಾಗ ಮಾತ್ರ ಕಾಯ್ದೆಗಳು ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಸ್.ಟಿ ಅಂಜನ್ ಕುಮಾರ್ ಹೇಳಿದ್ದಾರೆ. ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ಆರ್‌ಟಿಐ ಫೊಕ್ಸೊ ಕಾಯ್ದೆ, ಬಾಲ್ಯ ವಿವಾಹ, ಬಾಲಕಾರ್ಮಿಕ ನಿಷೇಧ ಕಾಯ್ದೆಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶ ಕಲ್ಯಾಣ ರಾಜ್ಯವಾಗಬೇಕಾದರೆ ದುರ್ಬಲರು, ಹಿಂದುಳಿದವರು, ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಯಿಂದ ಮಾತ್ರ ಸುಖಿ ರಾಜ್ಯವಾಗುತ್ತದೆ. ಎಲ್ಲರೂ ಸಮಾನತೆಯಿಂದ ಕೂಡಿರಬೇಕು. ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿರುವುದು ವಿಷಾದಕರ ಸಂಗತಿ ಎಂದರು. ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕ್ರೌರ್ಯ, ಹಿಂಸೆ, ಅತ್ಯಾಚಾರ ಇವುಗಳಿಂದ ರಕ್ಷಣೆ ಮಾಡಬೇಕು. ಮಹಿಳೆ ಮತ್ತು ಮಕ್ಕಳ ಹಕ್ಕುಗಳನ್ನು ಕಾಪಾಡಿದಾಗ ಮುಂದಿನ ಪೀಳಿಗೆಯ ಭವಿಷ್ಯದ ಅಭಿವೃದ್ಧಿ ಕಾಣಲು ಸಾಧ್ಯ ಎಂದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ವಿ.ರೂಪಾನಾಯ್ಕಿ ಮಾತನಾಡಿ, ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳು ನಿರಂತರವಾಗಿ ನಡೆಯುತ್ತಿರುವ ದುರಂತದ ಸಂಗತಿ. ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಮಾತ್ರ ಕೆಲಸ ಮಾಡಿದರೆ ಸಾಲದು. ಪ್ರತಿಯೊಂದು ಇಲಾಖೆಯು ಸಹ ಜವಾಬ್ದಾರಿ ಹೊಂದಬೇಕು.ಕಂದಾಯ ಇಲಾಖೆಯ ತಹಶೀಲ್ದಾರ್ ಇವುಗಳನ್ನು ನಿಲ್ಲಿಸಬೇಕಾದ ಮನೋಭಾವನೆಯನ್ನು ಹೊಂದಬೇಕು ಎಂದರು. ರಾಜ್ಯದಲ್ಲಿ 13 ಲಕ್ಷ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದು, ಪ್ರತೀ ಶಾಲೆಯಲ್ಲಿ ವಸ್ತಿ ಸಮಿತಿ ರಚನೆ ಮಾಡಬೇಕಾಗಿದ್ದು, ಆದರೆ ಇದುವರೆಗೂ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪ್ರತೀ ಶಾಲಾ ಹಂತದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಸಮಿತಿಯನ್ನು ರಚಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ಜಿಪಂ ಸಿಇಒ ಆರ್. ಗಿರೀಶ್, ಕಾರ್ಮಿಕ ಇಲಾಖೆ ಅಧಿಕಾರಿ ಸಿ.ಎಚ್. ಹಿರೇಗೌಡ್ರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಿ. ಪರಮೇಶ್ವರಪ್ಪ, ಎಚ್.ಎಲ್. ಗುರುಪ್ರಸಾದ್, ಮಂಜುನಾಥ ಸ್ವಾಮಿ, ಡಿವೈಎಸ್ಪಿ ಗಿರಿರಾಜ್ ಎಸ್. ಬಾವಿಮನಿ ಮತ್ತಿತರರು ಉಪಸ್ಥಿತರಿದ್ದರು.