ಶಿವಮೊಗ್ಗ-ಶಿಕಾರಿಪುರದಲ್ಲಿ ರಸ್ತೆ ಅಪಘಾತ
ಶಿವಮೊಗ್ಗ, ಮಾ. 30: ಜಿಲ್ಲೆಯ ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕುಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟು, ಆರು ಜನ ಗಾಯ ಗೊಂಡಿರುವ ಘಟನೆ ವರದಿಯಾಗಿದೆ. ಶಿವಮೊಗ್ಗ ವರದಿ: ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಯನೂರು ಗ್ರಾಮದ ಬಳಿ ಇತ್ತೀಚೆಗೆ ಕಾರೊಂದು ಪಲ್ಟಿಯಾಗಿ ಬಿದ್ದ ಪರಿಣಾಮ ಕಾರು ಚಾಲಕ ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನ ನಿವಾಸಿ ಮಹೇಶ್ (49) ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಇರವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರೆ ಮೂವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿ ಕೊಳ್ಳು ತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಶಿಕಾರಿಪುರ ವರದಿ: ತಾಲೂಕಿನ ಹಾರೋಗೊಪ್ಪ ಕೆರೆ ಏರಿಯ ಬಳಿ ಲಗೇಜ್ ಆಟೋವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಗೀತಾ (45) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಆಟೊದಲ್ಲಿದ್ದ ಇತರ ಮೂರು ಮಂದಿಗೆ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.