ಕೊಟ್ಪಾ ಕಾಯ್ದೆ ಉಲ್ಲಂಘನೆ 84 ಪ್ರಕರಣ ದಾಖಲು
ಶಿವಮೊಗ್ಗ, ಮಾ. 30: ಜಿಲ್ಲಾ ಎನ್.ಸಿ.ಡಿ.ಘಟಕವು ತಂಬಾಕು ನಿಯಂತ್ರಣ (ಕೊಟ್ಪಾ)ಕಾಯ್ದೆ ನಿಯಮವನ್ನು ಅನುಸರಿಸದವರ ವಿರುದ್ಧ 84ಪ್ರಕರಣಗಳನ್ನು ದಾಖಲಿಸಿ, ಅವರಿಂದ 11,590 ರೂ. ದಂಡ ವಸೂಲು ಮಾಡಲಾಗಿದೆ ಎಂದು ಎನ್.ಟಿ.ಪಿ.ಸಿ. ಜಿಲ್ಲಾ ಘಟಕದ ಅನುಷ್ಠಾನಾಧಿಕಾರಿ ಅವರು ತಿಳಿಸಿದ್ದಾರೆ.
ಶಿವಮೊಗ್ಗವನ್ನು ಅತ್ಯುತ್ತಮ ಕೊಟ್ಪಾ ಅನುಷ್ಠಾನಿತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಅಪರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಹಾಗೂ ಎನ್.ಸಿ.ಡಿ.ಘಟಕದ ಜಿಲ್ಲಾ ಅನುಷ್ಠಾನಾಧಿಕಾರಿಗಳ ನಿರ್ದೇಶನದಂತೆ ನಗರದಲ್ಲಿ ಇತ್ತೀಚೆಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಜಾರಿ ಕುರಿತು ವಿಶೇಷ ಕಾರ್ಯಾಚರಣೆ ನಡೆಸಿ, ಕಾಯ್ದೆಯನ್ನು ಅನುಸರಿಸದಿರುವವರ ವಿರುದ್ಧ ಒಟ್ಟು 84ಪ್ರಕರಣಗಳನ್ನು ದಾಖಲಿಸಿ, ಅವರಿಂದ 11,590ರೂ. ದಂಡ ವಸೂಲಿ ಮಾಡಲಾಯಿತು.
ಈ ಕಾಯ್ದೆ ಅನುಷ್ಠಾನದ ಪ್ರಗತಿ ಪರಿಶೀಲಿಸುವ ಸಂಬಂಧ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಲಾಗಿತ್ತು.
ಈ ತಂಡಗಳಲ್ಲಿ ರಾಜ್ಯ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ನಗರಪಾಲಿಕೆ, ಕಾರ್ಮಿಕ ಇಲಾಖೆ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಅಧಿಕಾರಿಗಳನ್ನೊಳಗೊಂಡ ಹಲವು ವಿಶೇಷ ತಂಡಗಳು ನಗರದ ಬಿ.ಎಚ್.ರಸ್ತೆ, ಬಾಪೂಜಿ ನಗರ, ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜು ಆವರಣ, ರವೀಂದ್ರ ನಗರ, ವಿನೋಬ ನಗರ, ಬಸ್ಸ್‌ನಿಲ್ದಾಣ ಆವರಣ ಮುಂತಾದ ಸ್ಥಳಗಳಲ್ಲಿ ಕಾರ್ಯಾ ಚರಣೆ ನಡೆಸಿ, ಕಾಯ್ದೆಯ ನಿಯಮಗಳನ್ನು ಪಾಲಿಸದ ಅಂಗಡಿ ಮುಂಗಟ್ಟುಗಳು, ಸರಕಾರಿ ಕಚೇರಿಗಳು, ಹೊಟೇಲ್, ಶಿಕ್ಷಣ ಸಂಸ್ಥೆಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಹಾಗೂ ಶಾಲಾ-ಕಾಲೇಜುಗಳ ಸುತ್ತಮುತ್ತಲ ಪ್ರದೇಶಗಳಲ್ಲಿನ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.