ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲು
ಶಿವಮೊಗ್ಗ, ಮಾ. 30: ವಿಶೇಷ ಘಟಕ ಯೋಜನೆ ಅನುಷ್ಠಾನದಲ್ಲಿ ಕಳಪೆ ಸಾಧನೆ ಮಾಡಿರುವ ಇಲಾಖೆಗಳ ಅಧಿಕಾರಿಗಳ ವಿರುದ್ಧ ದಲಿತರ ಮೇಲೆ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ) ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ದಲಿತರ ಮೇಲಿನ ದೌರ್ಜನ್ಯ ತಡೆ ಜಿಲ್ಲಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದಿನ ಸಭೆಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ 17 ಇಲಾಖೆಗಳು ಶೇ.100 ಸಾಧನೆ ಮಾಡಿವೆ. ಅವರಿಗೆ ಜಿಲ್ಲಾಡಳಿತದಿಂದ ಪ್ರಶಂಸಾ ಪತ್ರಗಳನ್ನು ವಿತರಿಸಲಾಗುವುದು. ಇನ್ನು ಕೇವಲ ಆರು ಇಲಾಖೆಗಳು ಶೇ.95ಕ್ಕಿಂತ ಕಡಿಮೆ ಸಾಧನೆ ಮಾಡಿದ್ದು, ಈಗಾಗಲೇ ಶೇ.100 ರಷ್ಟು ಭೌತಿಕ ಗುರಿ ಸಾಧಿಸಿರುವುರಿಂದ ವಿವರಣೆ ಕೇಳಲಾಗುವುದು. ಅಲ್ಲದೆ ಶೇ. 50ಕ್ಕಿಂತ ಕಡಿಮೆ ಸಾಧಿಸಿರುವ ಇಲಾಖೆ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ವಿಶೇಷ ಘಟಕ ಯೋಜನೆ ಅನುಷ್ಠಾನದಲ್ಲಿ ಶೂನ್ಯ ಸಾಧನೆ ಮಾಡಿರುವ ಕೆಎಂಎಫ್ ಎಂಡಿ ಅವರಿಗೆ ನೋಟಿಸ್ ಜಾರಿಗೊಳಿಸುವಂತೆ ಅವರು ಸೂಚಿಸಿದರು. ಅಲ್ಲದೆ ಈ ತಿಂಗಳಾಂತ್ಯದಲ್ಲಿ ಎಲ್ಲ ಸಾಧನೆ ಪರಿಶೀಲನೆ ನಡೆಸಿ ಕಳಪೆ ಕಂಡು ಬಂದಲ್ಲಿ ಕಾಯ್ದೆ ಪ್ರಕಾರ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಸಭೆಯಲ್ಲಿ ತಿಳಿಸಿದರು.
ತರಬೇತಿ ಕೇಂದ್ರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಯುವ ಸಮುದಾಯ ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅನುಕೂಲವಾಗುವಂತೆ ಶಿವಮೊಗ್ಗ ನಗರದಲ್ಲಿ ಸುಸಜ್ಜಿತ ತರಬೇತಿ ಕೇಂದ್ರವೊಂದನ್ನು ಸ್ಥಾಪಿಸುವ ಉದ್ದೇಶವಿದೆ ಎಂದರು.